ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಜಾತ್ಯಾತೀತ ಜನತಾದಳ, ಭಾನುವಾರದಂದು ಮೈಸೂರಿನಲ್ಲಿ ಪಂಚರತ್ನ ರಥಯಾತ್ರೆ ಸಮಾರೋಪ ಸಮಾರಂಭ ನಡೆಸಿದ್ದು, ಇದರಲ್ಲಿ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರು ಪಾಲ್ಗೊಂಡಿದ್ದರು.
ಈಗಾಗಲೇ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜೆಡಿಎಸ್ ಪ್ರಕಟಿಸಿದ್ದು, ಇದರ ಮಧ್ಯೆ ಕೋಲ್ಕತ್ತಾಗೆ ತೆರಳಿದ್ದ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬರುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಆಹ್ವಾನಿಸಿದ್ದರು.
ಇದಕ್ಕೆ ಮಮತಾ ಬ್ಯಾನರ್ಜಿಯವರು ಪೂರಕವಾಗಿ ಸ್ಪಂದಿಸಿದ್ದು, ಇದೀಗ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಕೂಡ ಜಾತ್ಯಾತೀತ ಜನತಾದಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಈ ವಿಷಯವನ್ನು ಚಂದ್ರಶೇಖರ ರಾವ್ ಅವರ ಆಪ್ತ ಮೂಲಗಳು ಖಚಿತಪಡಿಸಿವೆ.