ಅತ್ತೆ-ಮಾವಂದಿರು ತಮ್ಮ ವಿಧವೆ ಸೊಸೆಯಿಂದ ಜೀವನಾಂಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಔರಂಗಾಬಾದ್‌ನಲ್ಲಿರುವ ಬಾಂಬೆ ಹೈಕೋರ್ಟ್‌ನ ಏಕಸದಸ್ಯ ಪೀಠವು ಇತ್ತೀಚೆಗೆ ತೀರ್ಪು ನೀಡಿದೆ.
ಇದು ಶಾಸಕಾಂಗದ ಯೋಜನೆ ಅಲ್ಲ ಮತ್ತು ಶಾಸಕಾಂಗವು ಸೆಕ್ಷನ್ 125 ರಲ್ಲಿ ಅತ್ತೆ-ಮಾವನನ್ನು ಸೇರಿಸಿಲ್ಲ ಎಂದು ಪರಿಗಣಿಸಲಾಗಿದೆ. ನೀಡಿರುವ ಸಂಬಂಧಗಳ ಪಟ್ಟಿಯು ಸಮಗ್ರವಾಗಿದೆ ಮತ್ತು ಬೇರೆ ಯಾವುದೇ ವ್ಯಾಖ್ಯಾನಕ್ಕೆ ಅವಕಾಶವಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ.
ಅರ್ಜಿದಾರರಾದ ಶೋಭಾ ಅವರು ಎಂಎಸ್‌ಆರ್‌ಟಿಸಿಯಲ್ಲಿ ಕಂಡಕ್ಟರ್ ಆಗಿದ್ದ ಪತಿ ನಿಧನರಾದ ನಂತರ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ವಯಸ್ಸಾದ ಅವರ ಅತ್ತೆ- ಮಾವ ಆದಾಯದ ಯಾವುದೇ ಮೂಲವನ್ನು ಹೊಂದಿರಲಿಲ್ಲ. ಹೀಗಾಗಿ ಜಾಲ್‌ಕೋಟ್‌ನ ನ್ಯಾಯಾಧಿಕಾರಿ ಗ್ರಾಮ ನ್ಯಾಯಾಲಯದಲ್ಲಿ ಜೀವನ ನಿರ್ವಹಣೆಗಾಗಿ ಅತ್ತೆ – ಮಾವ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಶೋಭಾ, ತನ್ನ ಅತ್ತೆ- ಮಾವನಿಗೆ ನಾಲ್ವರು ಹೆಣ್ಣು ಮಕ್ಕಳಿದ್ದು ಅವರು ಮದುವೆಯಾಗಿ ತಮ್ಮ ಗಂಡಂದಿರೊಂದಿಗೆ ಇದ್ದಾರೆ. ಮತ್ತು ಇವರಿಗೆ ಸ್ವಂತ ಮನೆ ಮತ್ತು ಜಮೀನು ಇದೆ. ತನ್ನ ಅತ್ತೆ ಎಂಎಸ್‌ಆರ್‌ಟಿಸಿಯಿಂದ 1,88,000 ರೂ.ಗಳನ್ನು ಪಡೆದಿದ್ದು, ಉಳಿದ ಮೊತ್ತವನ್ನು ತನ್ನ ಅಪ್ರಾಪ್ತ ಮಗನಿಗೆ ನೀಡಲಾಗಿದೆ ಎಂದರು.
ಹೀಗಾಗಿ ಅವರಿಗೆ CrPc ಯ ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶವನ್ನು ಪಾವತಿಸುವುದು ಕಾನೂನುಬದ್ಧವಲ್ಲ ಎಂದು ವಾದಿಸಿದರು. ಆದರೆ ಅವರ ಅತ್ತೆ- ಮಾವ ಸೆಕ್ಷನ್ 125 ರ ಅಡಿಯಲ್ಲಿ ತಮಗೆ ಸೊಸೆ ಜೀವನಾಂಶ ನೀಡಬೇಕೆಂದು ವಾದಿಸಿದರು.
ಪ್ರತಿವಾದಿಗಳು ಯಾವುದೇ ಜೀವನೋಪಾಯದ ಮೂಲವಿಲ್ಲದ ಹಿರಿಯ ನಾಗರಿಕರಾಗಿರುವುದರಿಂದ ಶೋಭಾ ಅವರು ಅವನ ಜೀವನಾಂಶ ನಿರ್ವಹಿಸಬೇಕೆಂದು ನ್ಯಾಯಾಧಿಕಾರಿ ಗ್ರಾಮ ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ಆದೇಶದ ವಿರುದ್ಧ ಶೋಭಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರತಿವಾದಿಗಳು ಸೆಕ್ಷನ್ 125 ರಲ್ಲಿ ಉಲ್ಲೇಖಿಸಿರುವ ಯಾವುದೇ ವರ್ಗಕ್ಕೆ ಸೇರುವುದಿಲ್ಲ ಎಂದು ಶೋಭಾ ಅವರು ಹೈಕೋರ್ಟ್ ಮುಂದೆ ವಾದಿಸಿದರು. ಶೋಭಾ ವಾದ ಒಪ್ಪಿಕೊಂಡ ಕೋರ್ಟ್ ಮೃತನ ತಂದೆ ತಾಯಿ ಈಗಾಗ್ಲೇ ಎಂಎಸ್‌ಆರ್‌ಟಿಸಿಯಿಂದ 1,88,000 ರೂ.ಪಡೆದಿದ್ದಾರೆ. ಮತ್ತು ಅರ್ಜಿದಾರರ ನೇಮಕವು ಆಕೆಯ ಪತಿಯ ಸಾವಿನ ಅನುಕಂಪದ ಆಧಾರದ ಮೇಲೆ ನೀಡಿರುವುದಲ್ಲ. ಮತ್ತು ಅವರು ಸೆಕ್ಷನ್ 125 ರಲ್ಲಿ ಉಲ್ಲೇಖಿಸಿರುವ ಸಂಬಂಧದ ಅಡಿಯಲ್ಲಿ ಬರುವುದಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.