ಬೇಸಿಗೆಯಲ್ಲಿ ಸಾಮಾನ್ಯವಾಗಿ ವಿದ್ಯುತ್ ಕೊರತೆ ಎದುರಾಗುವ ಕಾರಣ ಲೋಡ್ ಶೆಡ್ಡಿಂಗ್ ಜಾರಿಗೊಳಿಸಲಾಗುತ್ತದೆ. ಆದರೆ ರಾಜ್ಯದ ಕೆಲವು ಭಾಗಗಳಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯವಾಗುತ್ತಿದ್ದ ಕಾರಣ ಪರೋಕ್ಷವಾಗಿ ಲೋಡ್ ಶೆಡ್ಡಿಂಗ್ ಜಾರಿಗೊಳಿಸಲಾಗಿದೆಯಾ ಎಂಬ ಪ್ರಶ್ನೆ ಮೂಡಿತ್ತು.
ಇದು ಪರೀಕ್ಷಾ ಸಮಯವಾಗಿರುವ ಕಾರಣ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟಾಗುತ್ತದೆಯೋ ಎಂಬ ಆತಂಕಕ್ಕೆ ಒಳಗಾಗಿದ್ದರು. ಆದರೆ ಇದೀಗ ಇಂಧನ ಸಚಿವ ಸುನಿಲ್ ಕುಮಾರ್ ನೆಮ್ಮದಿಯ ಸುದ್ದಿಯೊಂದನ್ನು ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಾಸ್ತವವಾಗಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಪರಿಸ್ಥಿತಿ ಇಲ್ಲ. ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ದಾಸ್ತಾನು ಸಾಕಷ್ಟಿದ್ದು, ಕಾಂಗ್ರೆಸ್ ಹೇಳುತ್ತಿರುವಂತೆ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಕ್ಷಾಮ ಸ್ಥಿತಿ ಸೃಷ್ಟಿಯಾಗಿಲ್ಲ ಎಂದರು.
ರಾಜ್ಯದ ಯಾವುದಾದರೂ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದ್ದರೆ ಅದು ಸರಬರಾಜಿನಲ್ಲಿ ಎದುರಾದ ಸಮಸ್ಯೆಯಿಂದ ಆದ ತೊಂದರೆ ಹೊರತು ಲೋಡ್ ಶೆಡ್ಡಿಂಗ್ ನಿಂದ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.