ಮದುವೆಗೆ ಒಪ್ಪದ ಕಾರಣಕ್ಕೆ ಸಹಪಾಠಿಯನ್ನೇ ಇರಿದು ಕೊಂದಿದ್ದ ವ್ಯಕ್ತಿಯ ಮರಣದಂಡನೆಯನ್ನು ಟಿವಿಯಲ್ಲಿ ನೇರ ಪ್ರಸಾರ ಮಾಡುವಂತೆ ಈಜಿಪ್ಟ್ ನ್ಯಾಯಾಲಯ ಸೂಚಿಸಿದೆ. ಕಳೆದ ತಿಂಗಳು ಮನ್ಸೌರಾ ವಿಶ್ವವಿದ್ಯಾನಿಲಯದ ಹೊರಭಾಗದಲ್ಲಿ 21 ವರ್ಷದ ಮೊಹಮ್ಮದ್ ಆದೆಲ್ ಎಂಬಾತ ತನ್ನದೇ ಕ್ಲಾಸ್‌ನಲ್ಲಿ ಓದ್ತಾ ಇದ್ದ ನಾಯಿರಾ ಅಶ್ರಫ್ ಎಂಬಾಕೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದ.
ಈತನ ಆರೋಪ ಸಾಬೀತಾಗಿದ್ದು, ಜೂನ್ 28ರಂದು ನ್ಯಾಯಾಲಯ ಮೊಹಮ್ಮದ್‌ಗೆ ಮರಣದಂಡನೆ ವಿಧಿಸಿತ್ತು. ಭವಿಷ್ಯದಲ್ಲಿ ಇಂತಹ ಹೇಯ ಕೃತ್ಯವನ್ನು ಮತ್ಯಾರೂ ಮಾಡಬಾರದು ಎಂಬ ಕಾರಣಕ್ಕೆ ಮೊಹಮ್ಮದ್‌ನನ್ನು ನೇಣುಗಂಬಕ್ಕೆ ಏರಿಸುವ ದೃಶ್ಯವನ್ನು ಟಿವಿಯಲ್ಲಿ ನೇರ ಪ್ರಸಾರ ಮಾಡಬೇಕೆಂದು ಮನ್ಸೌರಾ ಕೋರ್ಟ್ ಹೌಸ್, ಪಾರ್ಲಿಮೆಂಟ್‌ಗೆ ಪತ್ರ ಬರೆದಿದೆ.
ಇನ್ನೊಂದೆಡೆ ಮರಣದಂಡನೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಮೊಹಮ್ಮದ್ ಪರ ವಕೀಲರು ತಿಳಿಸಿದ್ದಾರೆ. ಆತನನ್ನು ನೇಣಿಗೇರಿಸಲು ಇನ್ನೂ 60 ದಿನಗಳ ಕಾಲಾವಕಾಶವಿದ್ದು, ಕಾನೂನು ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ತನ್ನನ್ನು ಮದುವೆಯಾಗುವಂತೆ ಮೊಹಮ್ಮದ್, ನಾಯಿರಾಗೆ ಪ್ರಪೋಸ್ ಮಾಡಿದ್ದ. ಆದ್ರೆ ಆಕೆ ನಿರಾಕರಿಸಿದ್ದಳು. ಇದರಿಂದ ರೊಚ್ಚಿಗೆದ್ದ ಮೊಹಮ್ಮದ್ ಜನನಿಬಿಡ ರಸ್ತೆಯಲ್ಲೇ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಇದರ ಗ್ರಾಫಿಕ್ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿತ್ತು.
ಇನ್ನೊಂದೆಡೆ ಇತ್ತೀಚಿನ ದಿನಗಳಲ್ಲಿ ಈಜಿಪ್ತ್‌ನಲ್ಲಿ ಮರಣದಂಡನೆ ಪ್ರಕರಣಗಳು ಹೆಚ್ತಾ ಇರೋದು ಕಳವಳಕ್ಕೆ ಕಾರಣವಾಗಿದೆ. 1998ರಲ್ಲಿ ಓರ್ವ ಮಹಿಳೆ ಮತ್ತು ಇಬ್ಬರನ್ನು ಕೊಂದಿದ್ದ ಮೂವರನ್ನು ನೇಣಿಗೇರಿಸುವ ದೃಶ್ಯವನ್ನು ಸಹ ಟಿವಿಯಲ್ಲಿ ನೇರಪ್ರಸಾರ ಮಾಡಲಾಗಿತ್ತು.