ವಿದ್ಯಾರ್ಥಿನಿಯೊಬ್ಬರು ಕಳೆದುಕೊಂಡಿದ್ದ ಮೊಬೈಲನ್ನು ಪತ್ತೆ ಹಚ್ಚಿ ಅದನ್ನು ಮರಳಿಸಲು ಪೊಲೀಸ್ ಪೇದೆ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಇದೀಗ ವಿದ್ಯಾರ್ಥಿನಿ ನೀಡಿದ ದೂರಿನಂತೆ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಇಂಥದೊಂದು ಪ್ರಕರಣ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿಯಲ್ಲಿ ನಡೆದಿದ್ದು, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಬೃಂದಾ ಎಂಬವರು ಅಕ್ಟೋಬರ್ 20ರಂದು ತಮ್ಮ ಮೊಬೈಲ್ ಕಳೆದುಕೊಂಡಿದ್ದರು.
ಹೀಗಾಗಿ ಅವರು ಜವಗೊಂಡನಹಳ್ಳಿ ಪೊಲೀಸ್ ಉಪ ಠಾಣೆಗೆ ದೂರು ನೀಡಲು ತೆರಳಿದ್ದ ವೇಳೆ ಅಲ್ಲಿನ ಪೊಲೀಸ್ ಪೇದೆ ಹರೀಶ್ ಎಂಬುವರು, ದೂರು ನೀಡಲು ಹಿರಿಯೂರು ಗ್ರಾಮಾಂತರ ಠಾಣೆಗೆ ಹೋಗಿ. ಆದರೆ ದೂರು ಇಲ್ಲದೆ ಹಾಗೆಯೇ ಹುಡುಕಿಕೊಡಲು ಹಣ ನೀಡಬೇಕಾಗುತ್ತದೆ ಎಂದು ಬೇಡಿಕೆ ಇಟ್ಟಿದ್ದ.
ಅಕ್ಟೋಬರ್ 27ರಂದು ವಿದ್ಯಾರ್ಥಿನಿಗೆ ಕರೆ ಮಾಡಿದ್ದ ಪೊಲೀಸ್ ಪೇದೆ ಹರೀಶ್, ನಿಮ್ಮ ಮೊಬೈಲ್ ಸಿಕ್ಕಿದೆ ಇದಕ್ಕಾಗಿ 5000 ರೂಪಾಯಿ ನೀಡಿ ಎಂದು ಹೇಳಿದ್ದ. ಹೀಗಾಗಿ ಮೊದಲಿಗೆ 3000 ರೂಪಾಯಿ ನೀಡಿದ್ದ ವಿದ್ಯಾರ್ಥಿನಿ, ಉಳಿದ 2000 ರೂಪಾಯಿ ನೀಡುವ ವೇಳೆ ಲೋಕಾಯುಕ್ತರಿಗೆ ದೂರು ನೀಡಿದ್ದರು. ಇದೀಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.