ಪಿ.ಎಚ್.ಡಿ. ಪ್ರಬಂಧ ಅಂಗೀಕರಿಸಲು ಮೈಸೂರಿನಿಂದ ಬರುವ ಬಾಹ್ಯ ಪರಿವೀಕ್ಷಕರಿಗೆ ಹಣ ನೀಡಬೇಕು ಎಂದು ಹೇಳಿ ವಿದ್ಯಾರ್ಥಿನಿಯಿಂದ ಲಂಚ ಪಡೆದಿದ್ದ ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅನಿತ ರವಿಶಂಕರ್ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಡಾ. ಅನಿತಾ ರವಿಶಂಕರ್ ಅವರಿಗೆ ವಿವಿಧ ಕಲಂಗಳಡಿ ಎರಡು ವರ್ಷ ಸಾದಾ ಶಿಕ್ಷೆ ಮತ್ತು 15 ಸಾವಿರ ದಂಡ ಹಾಗೂ ಮೂರು ವರ್ಷ ಸಾದಾ ಶಿಕ್ಷೆ ಮತ್ತು 15 ಸಾವಿರ ದಂಡ ವಿಧಿಸಿ ಆದೇಶಿಸಲಾಗಿದೆ. ದಂಡ ತೆರಲು ವಿಫಲರಾದರೆ ತಲಾ ಒಂದು ತಿಂಗಳು ಸಾದಾ ಶಿಕ್ಷೆ ಅನುಭವಿಸಲು ತೀರ್ಪು ನೀಡಲಾಗಿದೆ.
ಪ್ರಕರಣದ ವಿವರ: ಡಾ. ಅನಿತಾ ರವಿಶಂಕರ್ ಬಾಹ್ಯ ಪರಿವೀಕ್ಷಕರ ಖರ್ಚಿಗೆ ಹಣ ನೀಡಬೇಕೆಂದು ಹೇಳಿ ವಿದ್ಯಾರ್ಥಿನಿಗೆ ಕಂತಿನಂತೆ 10000, 4000 ಹಾಗೂ 16800 ರೂಪಾಯಿ ನೀಡುವಂತೆ ಸೂಚಿಸಿದ್ದರು. 2016ರ ಡಿಸೆಂಬರ್ 4ರಂದು ಮುಂಗಡ 5 ಸಾವಿರ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಇನ್ಸ್ಪೆಕ್ಟರ್ ಉಮೇಶ್ ಮತ್ತವರ ತಂಡ ಅನಿತಾರನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.