ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಗಳು ಸ್ನಾನ ಮಾಡುತ್ತಿದ್ದ ದೃಶ್ಯವನ್ನು ರಹಸ್ಯವಾಗಿ ಚಿತ್ರೀಕರಿಸಿ ತನ್ನ ಸ್ನೇಹಿತನಿಗೆ ಕಳಿಸಿದ್ದ ಪ್ರಕರಣ ನಡೆದಿದ್ದು, ಇದು ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು.
ವಿದ್ಯಾರ್ಥಿಗಳು ದೊಡ್ಡ ಮಟ್ಟದ ಪ್ರತಿಭಟನೆಯನ್ನು ನಡೆಸಿದ್ದು, ಇದಾದ ಬಳಿಕ ವಿದ್ಯಾರ್ಥಿನಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಇದೀಗ ವಾಣಿಜ್ಯ ನಗರಿ ಮುಂಬೈನಲ್ಲೂ ಇದೇ ಮಾದರಿಯ ಘಟನೆಯೊಂದು ನಡೆದಿದೆ.
ಮುಂಬೈ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಲಯದ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪೈಪ್ ಮೂಲಕ ಹಾಸ್ಟೆಲ್ ಮೇಲೆ ಏರಿ ಸ್ನಾನದ ಕೋಣೆಯೊಳಗೆ ಇಣುಕಿ ನೋಡುತ್ತಿದ್ದ ಎನ್ನಲಾಗಿದೆ.
ಇದೀಗ ವಿದ್ಯಾರ್ಥಿನಿಯರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು 21 ವರ್ಷದ ಪಿಂಟು ಗಾರಿಯ ಎಂಬಾತನನ್ನು ಬಂಧಿಸಿದ್ದಾರೆ. ಈತನ ಮೊಬೈಲ್ ಪರಿಶೀಲಿಸಿದ ವೇಳೆ ಯಾವುದೇ ವಿಡಿಯೋ ಅಥವಾ ಫೋಟೋ ಕಂಡು ಬಂದಿಲ್ಲ ಎಂದು ಹೇಳಲಾಗಿದೆ.