ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಲಭ್ಯವಿದ್ದು, ಆದರೆ ಗ್ರಾಮೀಣ ಪ್ರದೇಶಗಳಿಂದ ಮುಂಜಾನೆ ಬಲು ಬೇಗನೆ ಸರ್ಕಾರಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು.
ಈ ವಿದ್ಯಾರ್ಥಿಗಳು ಬೆಳಗೆ 7 ಗಂಟೆಗೆ ಮನೆ ಬಿಟ್ಟರೆ ಸಂಜೆ 5 ಗಂಟೆಗೆ ವಾಪಸ್ ಹೋಗುತ್ತಿದ್ದು ಮಧ್ಯಾಹ್ನದ ಊಟ ಬಡ ವಿದ್ಯಾರ್ಥಿಗಳಿಗೆ ಮರೀಚಿಕೆಯಾಗಿತ್ತು. ಈ ರೀತಿ ಸಮಸ್ಯೆ ಎದುರಿಸುತ್ತಿದ್ದ ಶಿರಾ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಸ್ಪಂದಿಸಿದ್ದಾರೆ.
ಹೌದು, ಬುಧವಾರದಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಕಾಲೇಜಿಗೆ ದಿಢೀರ್ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬೆಳಿಗ್ಗೆ ಬೇಗ ಹೊರಡುವ ಕಾರಣ ನಮಗೆ ಮನೆಯಿಂದ ಊಟ ತರಲು ಆಗುತ್ತಿಲ್ಲ. ಹೀಗಾಗಿ ಇದಕ್ಕೆ ವ್ಯವಸ್ಥೆ ಮಾಡುವಂತೆ ಮನವಿ ಸಲ್ಲಿಸಿದ್ದರು.
ಇದಕ್ಕೆ ಕೂಡಲೇ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯ ಚಿದಾನಂದ ಅವರು, ತಮಗೆ ಸರ್ಕಾರದಿಂದ ಪ್ರತಿ ತಿಂಗಳು ಸಿಗುವ ವೇತನ ಹಾಗೂ ಭತ್ಯೆ ಹಣವನ್ನು ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ನೀಡುವುದಾಗಿ ಘೋಷಿಸಿದರು. ಈ ರೀತಿ ವೇತನ ಹಾಗೂ ಭತ್ಯೆ ರೂಪದಲ್ಲಿ ಪ್ರತಿ ತಿಂಗಳು 2 ರಿಂದ 3 ಲಕ್ಷ ರೂಪಾಯಿ ಹಣ ಸಿಗುತ್ತದೆ ಎನ್ನಲಾಗಿದ್ದು, ಜುಲೈ 1ರಿಂದಲೇ ಇದನ್ನು ನೀಡುವುದಾಗಿ ಘೋಷಿಸಿದ್ದಾರೆ.