ಸಾಗರ: ಶಾಲಾ ಮಕ್ಕಳ ಪಠ್ಯ-ಪುಸ್ತಕ ಹೊರೆ ಇಳಿಸಲು ಸರ್ಕಾರ ಯೋಜನೆ ರೂಪಿಸುತ್ತಿದ್ದು, ಈ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು, ಶೀಘ್ರದಲ್ಲಿಯೇ ಶಾಲಾ ಮಕ್ಕಳ ಪುಸ್ತಕ ಹೊರೆ ಇಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ತಜ್ಞರ ಜೊತೆ ಚರ್ಚಿಸಲಾಗುವುದು ಎಂದರು.
ಪಠ್ಯಪುಸ್ತಕ ಪರೀಷ್ಕರಣೆ ಮಾಡಲಾಗುತ್ತಿದ್ದು, ಈಗಾಗಲೇ ಸಪ್ಲಿಮೆಂಟರಿ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಶಿಕ್ಷಕರ ಕೌನ್ಸಲಿಂಗ್ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಲ್ಲದೇ 1ರಿಂದ 8ನೇ ತರಗತಿಗಳವರೆಗೆ ಇದ್ದ ಮೊಟ್ಟೆ ವಿತರಣೆಯನ್ನು 10ನೇ ತರಗತಿವರೆಗೂ ವಿಸ್ತರಿಸಲಾಗಿದೆ. ಪ್ರಸ್ತುತ ವಾರಕ್ಕೆ ಎರಡು ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.