ಹಸುವಿನ ಸಗಣಿಯ ಬೆರಣಿಯನ್ನು ಮಾಡುವುದು ಹೇಗೆ ಎಂಬ ಬಗ್ಗೆ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಪ್ರತಿಷ್ಠಿತ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ಕಾರ್ಯಾಗಾರವನ್ನು ಆಯೋಜಿಸಿತ್ತು. ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರು ಸಗಣಿ ಬೆರಣಿಯನ್ನು ಮಾಡುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಲ್ಲದೆ, ಇವುಗಳನ್ನು ಪೂಜೆ, ಹವನ ಸಮಯದಲ್ಲಿ ಹಾಗೂ ಅಡುಗೆ ಇಂಧನವಾಗಿಯೂ ಬಳಸಬಹುದು ಎಂದು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳು ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಹಸುವಿನ ಸಗಣಿಯ ಬೆರಣಿಯನ್ನು ತಯಾರಿಸುವ ತರಬೇತಿಯನ್ನು ನೀಡಲಿದ್ದಾರೆ. ಗೋವಿನ ಸಗಣಿಯಿಂದ ತಯಾರಿಸಬಹುದಾದ ಉತ್ಪನ್ನಗಳನ್ನು ಮಾರಾಟ ಮಾಡಲು ಸರ್ಕಾರ ವ್ಯವಸ್ಥೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ. ವಿಶ್ವವಿದ್ಯಾನಿಲಯದ ಸಮಗ್ರ ಗ್ರಾಮಾಭಿವೃದ್ಧಿ ಕೇಂದ್ರದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಬಿಎಚ್‌ಯು ವಿಡಿಯೋವನ್ನು ಟ್ವೀಟ್ ಮಾಡಿದೆ.
ಟ್ವಿಟ್ಟರ್ ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಅನೇಕ ಜನರು ಮೀಮ್‌ಗಳು ಮತ್ತು ಹಾಸ್ಯಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಹಳ್ಳಿಗಳ ಜನರಿಗೆ ಈಗಾಗಲೇ ಹಸುವಿನ ಸಗಣಿಯ ಬೆರಣಿಯನ್ನು ಮಾಡುವುದು ಹೇಗೆ ಎಂಬುದು ತಿಳಿದಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಇತರರು ವಿಶ್ವವಿದ್ಯಾನಿಲಯಗಳು ಉನ್ನತ ಶಿಕ್ಷಣದ ಸ್ಥಳಗಳಾಗಬೇಕು. ಆದರೆ, ಹಸುವಿನ ಸಗಣಿಯ ಬೆರಣಿ ಹೇಗೆ ಮಾಡುವುದನ್ನು ಕಲಿಯಲು ಅಲ್ಲ ಅಂತಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.