ರಾಯ್ಪುರ: 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಛತ್ತೀಸ್ಗಢ ಮುಖ್ಯಮಂತ್ರಿ ಭರ್ಜರಿ ಘೋಷಣೆ ಮಾಡಿದ್ದಾರೆ.
ವಿದ್ಯಾರ್ಥಿಗಳು ಕಷ್ಟಪಟ್ಟು ಓದಲು ಮತ್ತು ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರೇಪಿಸುವ ಪ್ರಯತ್ನದಲ್ಲಿ ಸಿಎಂ ಭೂಪೇಶ್ ಬಘೇಲ್, 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ಗಳಿಗೆ ಉಚಿತ ಹೆಲಿಕಾಪ್ಟರ್ ರೈಡ್ ಘೋಷಿಸಿದ್ದಾರೆ.
10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಟಾಪ್ 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್ ರೈಡ್ನೊಂದಿಗೆ ಬಹುಮಾನ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ. ಬಲರಾಂಪುರ ಜಿಲ್ಲೆಯ ರಾಜ್ಪುರದಲ್ಲಿ ತಮ್ಮ ಕ್ಷೇತ್ರವಾರು ಸಾರ್ವಜನಿಕ ಸಂವಾದ ಅಭಿಯಾನದ ಸಂದರ್ಭದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.
ಮಕ್ಕಳನ್ನು ಹುರಿದುಂಬಿಸಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ಟಾಪರ್ಗಳು ಮುಖ್ಯಮಂತ್ರಿಗಳ ಟಾಪರ್ಸ್ ಚಾಪರ್ ರೈಡ್ನಿಂದ ಸ್ಫೂರ್ತಿ ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ.
ವಿಮಾನ ಪ್ರಯಾಣ ಪ್ರತಿಯೊಬ್ಬರ ಆಸೆ. ಹೆಲಿಕಾಪ್ಟರ್ ರೈಡ್ ಮಕ್ಕಳ ಮನಸ್ಸಿನಲ್ಲಿ ಜೀವನದ ಆಕಾಶದಲ್ಲಿ ಎತ್ತರಕ್ಕೆ ಹಾರುವ ಬಯಕೆಯನ್ನು ಹುಟ್ಟುಹಾಕುತ್ತದೆ. ಅವರು ತಮ್ಮ ಗುರಿಯನ್ನು ಸಾಧಿಸಲು ತಮ್ಮ ಕೌಶಲ್ಯಗಳನ್ನು ಇನ್ನಷ್ಟು ಚುರುಕುಗೊಳಿಸುತ್ತಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.