ಸಾಮಾನ್ಯವಾಗಿ ಜಿಲ್ಲಾಧಿಕಾರಿಗಳೆಂದರೆ ಅವರಿಗೆ ವಿಪರೀತ ಕೆಲಸದ ಒತ್ತಡವಿರುತ್ತದೆ. ಜಿಲ್ಲೆಯ ಸಮಗ್ರ ಹಿತಕ್ಕಾಗಿ ಶ್ರಮಿಸಬೇಕಾಗಿರುವ ಕಾರಣ ಸದಾಕಾಲ ಸಭೆಗಳನ್ನು ನಡೆಸುತ್ತಾ ವಿಚಾರ ವಿನಿಮಯ ಮಾಡಬೇಕಾಗಿರುತ್ತದೆ.
ಇಂಥದರ ಮಧ್ಯೆಯೂ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ಕಾಲೇಜಿಗೆ ತೆರಳಿ ಮೂರು ಗಂಟೆಗಳಿಗೂ ಅಧಿಕ ಕಾಲ ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದ ಕುರಿತು ಸುದೀರ್ಘವಾಗಿ ಪಾಠ ಮಾಡಿ ತಮ್ಮ ಶಿಕ್ಷಣ ಪ್ರೀತಿಯನ್ನು ಮೆರೆದಿದ್ದಾರೆ.
ಶನಿವಾರ ಬೆಳಿಗ್ಗೆ ಚಿಕ್ಕಮಗಳೂರು ನಗರದ ಮಲೆನಾಡು ವಿದ್ಯಾಸಂಸ್ಥೆಗೆ ತೆರಳಿದ ಅವರು, ಪಿಯು ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ಪಾಠ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಕಾಲೇಜಿನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಮೇಶ್ ಅವರು ಪಾಲ್ಗೊಂಡಿದ್ದ ವೇಳೆ ಆಡಳಿತ ಮಂಡಳಿ ಮತ್ತು ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಪಾಠ ಮಾಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಸ್ಪಂದಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.