ಮಡಿಕೇರಿ : ಸಮಾಜ ಕಲ್ಯಾಣ ಇಲಾಖೆ (Department of Social Welfare) ವತಿಯಿಂದ 2023-24ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಕಾನೂನು ಪದವೀಧರರು ಹಿರಿಯ ವಕೀಲರ ಬಳಿ ವೃತ್ತಿ ತರಬೇತಿ ಪಡೆಯುವ ಅವಧಿಯಲ್ಲಿ ಶಿಷ್ಯವೇತನ (scholarship) ಪಾವತಿಸುವ ಸಲುವಾಗಿ ಜೂನ್, 15 ರಿಂದ ಜುಲೈ, 15 ರವರೆಗೆ ಇಲಾಖಾ ವೆಬ್ಸೈಟ್ www.sw.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಸಲ್ಲಿಸುವ ಪರಿಶಿಷ್ಟ ಜಾತಿ (Scheduled caste)
ಅಭ್ಯರ್ಥಿಯು ಕೊಡಗು ಜಿಲ್ಲೆಯವರಾಗಿರಬೇಕು. 40 ವರ್ಷ ವಯೋಮಿತಿಯೊಳಗಿರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಮೊದಲು ಮೂರು ಅಥವಾ ಐದು ವರ್ಷಗಳ ಒಳಗಡೆ ಕಾನೂನು ಪದವಿ ಪಡೆದಿರಬೇಕು. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪ್ರಾಸಿಕ್ಯೂಟ್ ಬಳಿ ಅಥವಾ 20 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ವಕೀಲರ ಬಳಿ ತರಬೇತಿಗೆ ನಿಯೋಜಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ತರಬೇತಿಯನ್ನು ಪೂರ್ಣಗೊಳಿಸದೆ ಬಿಟ್ಟು ಹೋಗಬಾರದು.
ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರಿ ಸಿಕ್ಕಿದರೆ ಮಾತ್ರ ನಿಯಮಾನುಸಾರ ಸಡಿಲಗೊಳಿಸುವುದು. ಒಂದು ವೇಳೆ ತರಬೇತಿ ಬಿಟ್ಟು ಹೋದಲ್ಲಿ ಅಂತವರ ಶಿಷ್ಯವೇತನವನ್ನು ನಿಯಮಾನುಸಾರ ವಸೂಲಿ ಮಾಡಲಾಗುವುದು. ತರಬೇತಿ ಅವಧಿ 2 ವರ್ಷಗಳಾಗಿದ್ದು, ಮಾಸಿಕ ರೂ.10 ಸಾವಿರ ಶಿಷ್ಯ ವೇತನವನ್ನು ನೀಡಲಾಗುವುದು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ರೂ.2.50 ಲಕ್ಷ ಮೀರತಕ್ಕದ್ದಲ್ಲ. ಸುಳ್ಳು ಮಾಹಿತಿ ದಾಖಲಾತಿಗಳನ್ನು ಒದಗಿಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುವುದು ಹಾಗೂ ತರಬೇತಿ ಅವಧಿಯಲ್ಲಿ ನೀಡಿದ ಶಿಷ್ಯವೇತನವನ್ನು ಶೇ.10 ರ ಬಡ್ಡಿಯೊಂದಿಗೆ ವಸೂಲಿ ಮಾಡಲಾಗುವುದು.
ಅರ್ಜಿಯಲ್ಲಿ ಪೂರ್ಣ ಮಾಹಿತಿ ಇಲ್ಲದಿದ್ದ ಪಕ್ಷದಲ್ಲಿ ಅರ್ಜಿ ಅಪೂರ್ಣವಾಗಿದ್ದಲ್ಲಿ ಅಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಯು ಕಾನೂನು ಪದವಿಯಲ್ಲಿ ತೇರ್ಗಡೆ ಹೊಂದಿದ ಮೂರು ವರ್ಷಗಳೊಳಗೆ ಬಾರ್ ಕೌನ್ಸಿಲ್ನಲ್ಲಿ ಹೆಸರು ನೋಂದಾಯಿಸಿದ ನಂತರ ಶಿಷ್ಯವೇತನ ಮತ್ತು ಎನ್ರೋಲ್ಮೆಂಟ್ ಫೀ ಯನ್ನು ನೀಡತಕ್ಕದ್ದು. ಅಭ್ಯರ್ಥಿಯು ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿದ್ದಲ್ಲಿ ಮತ್ತು ತರಬೇತಿಗೆ ಮಾಹಿತಿ ನೀಡದೆ ಗೈರು ಹಾಜರಾಗಿದ್ದಲ್ಲಿ ಶಿಷ್ಯವೇತನವನ್ನು ತಡೆಯಲಾಗುವುದು. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಕಾನೂನು ಪದವೀಧರ ತರಬೇತಿಗೆ ಆಯ್ಕೆಯಾದ ಮಹಿಳಾ ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ಗರ್ಭಿಣಿ ಸ್ಥಿತಿಯಲ್ಲಿರುವ ವೇಳೆ ಮಹಿಳಾ ಅಭ್ಯರ್ಥಿಗಳಿಗೆ 135 ದಿನಗಳ ತರಬೇತಿ ಭತ್ಯೆ ರಹಿತ ರಜೆಯನ್ನು (2 ವರ್ಷಗಳ ತರಬೇತಿಗೆ 1 ಬಾರಿ ಮಾತ್ರ ) ವೈದ್ಯಕೀಯ ಪ್ರಮಾಣ ಪತ್ರ ಪಡೆದು ರಜೆ ಮಂಜೂರುಗೊಳಿಸಿ ತರಬೇತಿಯನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಇಲಾಖಾ ವೆಬ್ ಸೈಟ್ www.sw.kar.nic.in ನಲ್ಲಿ ಅರ್ಜಿ ಸಲ್ಲಿಸಲು ಜುಲೈ, 15 ಕೊನೆಯ ದಿನವಾಗಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಸಂಬಂಧಿಸಿದ ದಾಖಲಾತಿಗಳನ್ನು ಉಪನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಕೊಡಗು ಜಿಲ್ಲೆ, ಮಡಿಕೇರಿ 9480843037, ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಮಡಿಕೇರಿ 9480843155, ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಸೋಮವಾರಪೇಟೆ 9480843156, ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ, ಪೊನ್ನಂಪೇಟೆ 9480843157 ಇಲ್ಲಿಗೆ ಸಲ್ಲಿಸಬೇಕು ಎಂದು ಮಡಿಕೇರಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.