ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಪ್ರತಿ ಬಾರಿಯೂ ವಿಳಂಬವಾಗಿ ಲಭ್ಯವಾಗುತ್ತಿದ್ದ ಶಾಲಾ ಸಮವಸ್ತ್ರ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭದ ಮೊದಲ ದಿನವೇ ಸಿಗಲಿದೆ. ಶಿಕ್ಷಣ ಇಲಾಖೆ ಈಗಾಗಲೇ ಇದಕ್ಕಾಗಿ ತಕ್ಕ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.
2023 – 24ನೇ ಸಾಲಿನ ಶೈಕ್ಷಣಿಕ ವರ್ಷ ಮೇ 29 ರಿಂದ ಆರಂಭವಾಗುತ್ತಿದ್ದು, ಅದೇ ದಿನದಂದು ಎಲ್ಲ ವಿದ್ಯಾರ್ಥಿಗಳಿಗೂ ಸಮವಸ್ತ್ರ ಪೂರೈಸುವ ಉದ್ದೇಶವನ್ನು ಶಿಕ್ಷಣ ಇಲಾಖೆ ಹೊಂದಿದೆ. ಟೆಂಡರ್ ಪಡೆದಿರುವ ಸಂಸ್ಥೆಗಳು ಈಗಾಗಲೇ ಶೇಕಡಾ 68 ರಷ್ಟು ಸಮವಸ್ತ್ರವನ್ನು ಗೋದಾಮಿಗೆ ತಲುಪಿಸಿವೆ ಎನ್ನಲಾಗಿದ್ದು, ಉಳಿದ ಶೇಕಡಾ 32ರಷ್ಟು ಸಮವಸ್ತ್ರ ಉತ್ಪಾದನೆಯ ಹಂತದಲ್ಲಿದೆ.
ಉಳಿಕೆ ಇರುವ ಸಮವಸ್ತ್ರವನ್ನು ಪೂರೈಸಲು ಮೇ ಎರಡನೇ ವಾರದ ವರೆಗೆ ಗಡುವು ನೀಡಲಾಗಿದ್ದು, ಹೀಗಾಗಿ ಶಾಲೆ ಆರಂಭಕ್ಕೂ ಮೊದಲೇ ತಲುಪುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಈಗಾಗಲೇ ಸಂಬಂಧಪಟ್ಟವರಿಗೆ ಸೂಚನೆಗಳನ್ನು ನೀಡಿದೆ. ಈ ಮೊದಲು ಶಾಲೆ ಆರಂಭವಾದರೂ ಹಲವು ದಿನಗಳ ಕಾಲ ಸಮವಸ್ತ್ರ ಸಿಗುತ್ತಿರಲಿಲ್ಲ. ಈ ಬಾರಿ ಇದು ಪುನರಾವರ್ತನೆಯಾಗಬಾರದು ಎಂಬ ಕಾರಣಕ್ಕೆ ಮುಂಚಿತವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.