ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಂಡ ಶಿಕ್ಷಕರು ಬೆಂಕಿಯಲ್ಲಿ ಸುಟ್ಟು ಹಾಕಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ವಿದ್ಯಾರ್ಥಿಗಳಿಂದ ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಂಡ ಶಿಕ್ಷಕರು, ನಂತರ ಬೆಂಕಿಯ ಬ್ಯಾರೆಲ್‌ಗೆ ಫೋನ್ ಗಳನ್ನು ಎಸೆದಿದ್ದಾರೆ. ಘಟನೆಯ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಶಿಕ್ಷಕರ ವರ್ತನೆಗೆ ನೆಟ್ಟಿಗರು ಕೆಂಡಕಾರಿದ್ದಾರೆ.
ವಿದ್ಯಾರ್ಥಿಗಳು ಶಾಲೆಗೆ ಮೊಬೈಲ್ ಫೋನ್ ಕೊಂಡೊಯ್ಯುವುದರ ಬಗ್ಗೆ ಬಹಳ ಹಿಂದಿನಿಂದಲೂ ಚರ್ಚಾಸ್ಪದ ವಿಷಯವಾಗಿದೆ. ಆದರೀಗ ಸಾಂಕ್ರಾಮಿಕ ರೋಗ ಹಾಗೂ ಆನ್ಲೈನ್ ಶಿಕ್ಷಣ ಕಲಿಕೆಯಿಂದಾಗಿ, ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಅನಿವಾರ್ಯವಾಗಿವೆ. ಹಾಗಾಗಿಯೇ ಈ ಕಠಿಣ ಶಿಕ್ಷೆ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ವಿದ್ಯಾರ್ಥಿಗಳು ಭಯಭೀತರಾಗಿ ದೂರದಿಂದ ನೋಡುತ್ತಿದ್ದರೆ, ಶಿಕ್ಷಕರೊಬ್ಬರು ಬೆಂಕಿಯ ಬ್ಯಾರೆಲ್‌ಗೆ ಸ್ಮಾರ್ಟ್‌ಫೋನ್‌ಗಳನ್ನು ಎಸೆಯುತ್ತಿರುವುದು ಕಂಡುಬಂದಿದೆ. ಹಲವಾರು ವಿದ್ಯಾರ್ಥಿಗಳು ಹಾಗೆ ಮಾಡದಂತೆ ಬೇಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಇದೇ ವೇಳೆ ಮತ್ತೊಬ್ಬ ಶಿಕ್ಷಕಿ ಕೂಡ ಬ್ಯಾರೆಲ್‌ಗೆ ಐಫೋನ್ ಎಸೆದಿದ್ದಾರೆ.
ವಿದ್ಯಾರ್ಥಿಗಳು ಶಾಲೆಗೆ ಫೋನ್ ತಂದಿದ್ದು ತಪ್ಪಾದರೂ ಕೂಡ, ಶಿಕ್ಷಕರು ಈ ರೀತಿಯಾಗಿ ನಾಶಪಡಿಸಬಾರದಿತ್ತು. ಕೆಲವು ದಿನಗಳ ಬಳಿಕ ಹಿಂದಿರುಗಿಸಬೇಕಾಗಿತ್ತು ಅಂತಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.