ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಹೇಳಲಾಗುತ್ತಿದೆ. ಯಾರು ಮೊದಲು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೊ ಅವರನ್ನು ಮೊದಲು ಸ್ಥಳಾಂತರಿಸಲಾಗುವುದು ಎಂದು ಹೇಳುವ, ‘ಆಪರೇಷನ್ ಗಂಗಾ’ ಕುರಿತ ಮಾಧ್ಯಮ ವರದಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹಂಚಿಕೊಂಡಿದ್ದಾರೆ.
ವರದಿ ಹಂಚಿಕೊಂಡಿರುವ ರಾಹುಲ್, ಇದು ಇಡೀ ದೇಶಕ್ಕೆ ಮಾಡುತ್ತಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸಹಾಯಕ ವಿದ್ಯಾರ್ಥಿಗಳೊಂದಿಗೆ ಹೀಗೆ ಅವಮಾನಕರವಾಗಿ ವರ್ತಿಸುತ್ತಿರುವುದು ಇಡೀ ದೇಶಕ್ಕೆ ಅವಮಾನವಾಗಿದೆ. ಈ ಕಹಿ ಸತ್ಯ ಆಪರೇಷನ್ ಗಂಗಾ ಹಾಗೂ ಮೋದಿ ಸರ್ಕಾರದ ನಿಜವಾದ ಮುಖವನ್ನು ತೋರಿಸುತ್ತದೆ ಎಂದಿದ್ದಾರೆ.
ಯುದ್ಧ ಪೀಡಿತ ಉಕ್ರೇನ್‌ನಿಂದ ವಿದ್ಯಾರ್ಥಿಗಳ ಸ್ಥಳಾಂತರದ ಕಾರ್ಯಚರಣೆ ಸಮರ್ಪಕವಾಗಿಲ್ಲ ಎಂದು ಈ ಹಿಂದೆಯು ರಾಹುಲ್ ಗಾಂಧಿ, ಮೋದಿ ನೇತೃತ್ವದ ಕೇಂದ್ರವನ್ನು ಟೀಕಿಸಿದ್ದರು. ಜೊತೆಗೆ ಸ್ಥಳಾಂತರ ಕಾರ್ಯಾಚರಣೆಯ ಸಂಪೂರ್ಣ ವಿವರ ಹಾಗೂ ಕಾರ್ಯಾಚರಣೆ ಹೇಗೆ ನಡೆಸಲಾಗುತ್ತಿದೆ ಎಂಬುದರ ಸೂಕ್ತ ವರದಿ ಕೇಳಿದ್ದರು.