ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ ವೇಳೆ ಪ್ರಸೂತಿ ತಜ್ಞರು ಲಭ್ಯವಿಲ್ಲದ ಕಾರಣ ಸಿಬ್ಬಂದಿ, ವಿಡಿಯೋ ಕಾಲ್ ಮೂಲಕ ವೈದ್ಯರ ಸಲಹೆಯೊಂದಿಗೆ ಹೆರಿಗೆ ಮಾಡಿಸಿದ್ದು, ಆದರೆ ಬಳಿಕ ತಾಯಿ – ಮಗು ಸಾವನ್ನಪ್ಪಿದ್ದಾರೆ.
ಇಂಥದೊಂದು ದಾರುಣ ಘಟನೆ ಪಂಜಾಬಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದ್ದು, ಮಾನಸಾ ಜಿಲ್ಲೆಯ ಈ ಮಹಿಳೆಯನ್ನು ಹೆರಿಗೆ ನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆ ತರಲಾಗಿತ್ತು.
ಆಕೆ ತೀವ್ರ ನೋವಿನಿಂದ ಬಳಲುತ್ತಿದ್ದರೂ ಸಹ ವೈದ್ಯರು ಸಕಾಲಕ್ಕೆ ಲಭ್ಯವಾಗದ ಕಾರಣ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿದ ವೇಳೆ ವಿಡಿಯೋ ಕಾಲ್ ಮೂಲಕ ಸಲಹೆ ನೀಡುವುದಾಗಿ ವೈದ್ಯರು ಹೇಳಿದ್ದಾರೆ. ಅದರಂತೆ ಸಿಬ್ಬಂದಿ ಮಹಿಳೆಗೆ ಹೆರಿಗೆ ಮಾಡಿಸಿದ್ದು, ಆದರೆ ಕೆಲ ಹೊತ್ತಿನಲ್ಲಿಯೇ ತಾಯಿ – ಮಗು ಸಾವನ್ನಪ್ಪಿದ್ದಾರೆ.
ಇದರಿಂದ ತೀವ್ರವಾಗಿ ಆಕ್ರೋಶಗೊಂಡ ಮಹಿಳೆಯ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದು, ಜಿಲ್ಲಾಡಳಿತಕ್ಕೂ ಇದರ ಮಾಹಿತಿ ತಲುಪಿದೆ. ಆದರೆ ಮಹಿಳೆ ಕುಟುಂಬಸ್ಥರು ಯಾವುದೇ ದೂರು ಸಲ್ಲಿಸಿಲ್ಲವೆಂದು ಹೇಳಲಾಗಿದ್ದು, ಜಿಲ್ಲಾಡಳಿತ ಸ್ವಯಂ ಪ್ರೇರಿತವಾಗಿ ತನಿಖೆಗೆ ಮುಂದಾಗಿದೆ.