ಚಿನ್ನ ಅಂದ್ರೆ ಸಾಕು ಎಂಥವರೂ ಬಾಯ್ಬಿಡ್ತಾರೆ. ಬಂಗಾರವನ್ನು ಹೊಟ್ಟೆಯಲ್ಲಿಟ್ಟುಕೊಂಡು ಬಂದು ಸಿಕ್ಕಿಬಿದ್ದವರೂ ಇದ್ದಾರೆ. ಸಣ್ಣ ಪುಟ್ಟ ಕಳ್ಳತನವಂತೂ ಮಾಮೂಲು. ಎಷ್ಟೋ ಘಟನೆಗಳಲ್ಲಿ ಕಳವು ನಡೆದು ವರ್ಷಗಳೇ ಕಳೆದ್ರೂ ಕಳ್ಳರು ಮಾತ್ರ ಸಿಕ್ಕಿಬೀಳುವುದಿಲ್ಲ.
ಪೊಲೀಸ್ ಅಧಿಕಾರಿಯೊಬ್ಬರು ಟ್ವಿಟರ್‌ನಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಚಿನ್ನದ ಸರ ಕದ್ದ ಸಂಪೂರ್ಣ ದೃಶ್ಯಗಳಿವೆ. ಆದರೆ ಈ ವೈರಲ್ ವಿಡಿಯೋ ನೋಡಿದ ಮೇಲೂ ಪ್ರಮುಖ ಆರೋಪಿಯನ್ನು ಹಿಡಿಯಲು ಮಾತ್ರ ಸಾಧ್ಯವಾಗುತ್ತಿಲ್ಲ.
ದೇಶದಲ್ಲಿ ಕಳ್ಳಸಾಗಣೆ ತಡೆಯಲು ಕಠಿಣ ಕಾನೂನು ಮಾಡಲಾಗಿದೆ. ಸ್ಮಗ್ಲರ್‌ಗಳನ್ನು ಕಂಬಿ ಹಿಂದೆ ತಳ್ಳಬಲ್ಲ ಖಡಕ್ ಆಫೀಸರ್‌ಗಳಿದ್ದಾರೆ. ಕಳವು ಮಾಡಿರೋದಕ್ಕೆ ಸಾಕ್ಷ್ಯವಾಗಿ ವಿಡಿಯೋ ಕೂಡ ಇದೆ. ಆದ್ರೂ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಯಾಕೆ ಸಾಧ್ಯವಾಗ್ತಿಲ್ಲ ಅನ್ನೋ ಅಚ್ಚರಿ ಸಹಜ. ಅಷ್ಟಕ್ಕೂ ಈ ಕಳ್ಳತನ ಮಾಡಿರುವವರು ಯಾರು ಗೊತ್ತಾ? ದೇಶದ ಅತಿ ಚಿಕ್ಕ ಕಳ್ಳರು, ಅರ್ಥಾತ್ ಇರುವೆಗಳು.
7 ಸೆಕೆಂಡುಗಳ ವಿಡಿಯೋ ಇದು. ಈ ವಿಡಿಯೋದಲ್ಲಿ ಕೆಲವು ಇರುವೆಗಳು ಚಿನ್ನದ ಸರವನ್ನು ಕದ್ದು ತೆಗೆದುಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿದೆ. ಈ ವಿಡಿಯೋ ನೋಡಿದ ಜನರಿಗೆ ಆಶ್ಚರ್ಯ, ಇರುವೆಗಳೂ ಚಿನ್ನದ ಸರ ಕದಿಯಲು ಶುರು ಮಾಡಿದ್ರೆ ಮುಂದೇನು ಗತಿ ಎಂದು ಕೇಳ್ತಿದ್ದಾರೆ ಕೆಲವರು. ಲಕ್ಷಾಂತರ ಜನರು ಈ ವಿಡಿಯೋ ನೋಡಿದ್ದು, ಈಗಾಗ್ಲೇ ವೈರಲ್ ಆಗಿದೆ. ಸಾಲು ಸಾಲು ಕಳ್ಳರನ್ನು ಹಿಡಿದು ಯಾವ ಕಾನೂನಿನ ಅಡಿಯಲ್ಲಿ ಶಿಕ್ಷಿಸುತ್ತೀರಿ ಎಂದು ಪೊಲೀಸರಿಗೆ ಜನರು ಸವಾಲು ಹಾಕಿದ್ದಾರೆ.