ಬಳ್ಳಾರಿ : ಇಡೀ ಜಗತ್ತಿನಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ನ ಕಾಟ ಶುರುವಾಗಿದೆ. ಇದರ ಬೆನ್ನಲ್ಲಿಯೇ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿನ ಜನರಿಗೆ ಮತ್ತೊಂದು ಆತಂಕ ಆರಂಭವಾಗಿದೆ.
ಈ ಎರಡು ಜಿಲ್ಲೆಗಳಲ್ಲಿ ಸರಾಸರಿ 3 ಕಂದಮ್ಮಗಳು ಪ್ರತಿದಿನ ಸಾವನ್ನಪ್ಪುತ್ತಿದ್ದು, ಎಲ್ಲೆಡೆ ಆತಂಕ ಮನೆ ಮಾಡುತ್ತಿದೆ. ಈ ಎರಡೂ ಜಿಲ್ಲೆಗಳು ಸೇರಿದಂತೆ 8 ತಿಂಗಳಲ್ಲಿ 350ಕ್ಕೂ ಅಧಿಕ ಆಗತಾನೆ ಹುಟ್ಟಿರುವ ಮಕ್ಕಳು ಸಾವನ್ನಪ್ಪಿವೆ. ವಿಜಯನಗರದಲ್ಲಿ 65 ಮಕ್ಕಳು ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ 293 ಮಕ್ಕಳು ಸಾವನ್ನಪ್ಪಿವೆ.
BIG NEWS: ನೈಟ್ ಕರ್ಫ್ಯೂ; ಸರ್ಕಾರದ ಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ಅಸಮಾಧಾನ
ಎಲ್ಲದಕ್ಕಿಂತಲೂ ಭಯಾನಕ ಸಂಗತಿ ಎಂದರೆ ಬಳ್ಳಾರಿಯ ದೊಡ್ಡ ಆಸ್ಪತ್ರೆಯಾಗಿರುವ ವಿಮ್ಸ್ ನಲ್ಲಿಯೇ ಈ ಅವಧಿಯಲ್ಲಿ ಬರೋಬ್ಬರಿ 290 ಮಕ್ಕಳು ಸಾವನ್ನಪ್ಪಿವೆ. ಸರ್ಕಾರಗಳು ಸಾಕಷ್ಟು ಯೋಜನೆಗಳ ಮೂಲಕ ಹಸುಗೂಸುಗಳ ಸಾವಿನ ಸಂಖ್ಯೆ ಕಡಿಮೆ ಮಾಡಲು ಯತ್ನಿಸುತ್ತಿವೆ. ಆದರೆ, ಈ ಎರಡೂ ಜಿಲ್ಲೆಗಳಲ್ಲಿನ ಸಮಸ್ಯೆಗೆ ಮಾತ್ರ ಇದುವರೆಗೂ ಉತ್ತರ ಸಿಗುತ್ತಿಲ್ಲ.
ಗ್ರಾಮೀಣ ಭಾಗದಲ್ಲಿಯೇ ಇಂತಹ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಗರ್ಭಿಣಿಯರು ಆಸ್ಪತ್ರೆಗೆ ಬರುವಷ್ಟರಲ್ಲಿಯೇ ದಾರಿ ಮಧ್ಯೆ ಹಸುಗೂಸು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಗರ್ಭಿಣಿಯರ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಯೋಜನೆ ಜಾರಿಗೊಳಿಸಬೇಕು ಎಂದು ಜನರು ಮನವಿ ಮಾಡುತ್ತಿದ್ದಾರೆ.