
ಏನು ಮಾಡದಿದ್ರು ತಿಂಗಳ ಶುರುವಿನಲ್ಲಿ ಸಂಬಳ ಬಂದು ಜೇಬಿಗೆ ಬೀಳಬೇಕು. ಇಂತಹದ್ದೊಂದು ಆಸೆ ನಮ್ಮಲ್ಲಿ ಒಂದಲ್ಲಾ ಒಂದು ಬಾರಿ ಮೂಡಿರುತ್ತದೆ. ಆದರೆ ಪಾಕಿಸ್ತಾನದಲ್ಲಿ ಇದು ನಿಜವಾಗಲೂ ನಡೆಯುತ್ತಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಹನ್ನೊಂದು ಸಾವಿರ ಶಾಲೆಗಳಲ್ಲಿರುವ ಶಿಕ್ಷಕರಿಗೆ ಏನು ಕೆಲಸ ಮಾಡದಿದ್ರು ಸಂಬಳ ಮಾತ್ರ ಆಗುತ್ತಿದೆ.
ಅಯ್ಯೋ ಶಿಕ್ಷಕರು ಏನು ಕೆಲಸ ಮಾಡುತ್ತಿಲ್ವ. ಅದ್ಹೇಗೆ ಸಾಧ್ಯ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಇದಕ್ಕೆ ಉತ್ತರ ಸಿಂಪಲ್ ಆದ್ರೂ ಅದ್ರಿಂದ ಆಗುತ್ತಿರುವ ಪರಿಣಾಮ ದೊಡ್ಡದು. ನಾವು ಈ ಶಿಕ್ಷಕರು ಏನು ಕೆಲಸ ಮಾಡುತ್ತಿಲ್ಲಾ ಅನ್ನೋದಕ್ಕೆ ಕಾರಣ ಆ ಪ್ರಾಂತ್ಯದಲ್ಲಿರುವ ಹನ್ನೊಂದು ಸಾವಿರ ಶಾಲೆಗಳಲ್ಲಿ ಮಕ್ಕಳೇ ಇಲ್ಲ.
ಹೌದು, ನಂಬಲು ಅಸಾಧ್ಯವಾದರೂ ಇದು ನಿಜವಾದ ಸಂಗತಿ. ಅಷ್ಟಕ್ಕೂ ಸಿಂಧ್ ಪ್ರದೇಶದಲ್ಲಿರುವ ಜನಸಂಖ್ಯೆಗೆ ಈ ಹನ್ನೊಂದು ಸಾವಿರ ಶಾಲೆಗಳು ಸಾಲುವುದಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳ ಸಂಖ್ಯೆಯೇ ಕಡಿಮೆ ಇದೆ. ಹೀಗಿರುವಾಗ ಕೆಲವೊಂದನ್ನು ಹೊರತುಪಡಿಸಿ, ಭಾಗಶಃ ಎಲ್ಲಾ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯದ ಸಮಸ್ಯೆ ಇದೆ.
ಆಟದ ಮೈದಾನವಿಲ್ಲ, ಕಾಂಪೌಂಡ್ ಇಲ್ಲ. 15% ಪ್ರೈಮರಿ ಶಾಲೆಗಳಿಗೆ ಕೇವಲ ಇಬ್ಬರು ಶಿಕ್ಷಕರಿದ್ದಾರೆ. ಕೆಲವು ಮಕ್ಕಳು ಶಾಲೆಗೆ ಹೋದರೂ ಅದು ಬೆರಳೆಣಿಕೆಯಷ್ಟು ಅಷ್ಟೇ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿಯಲ್ಲಿ ತಿಳಿದು ಬಂದಿದೆ.
ಇನ್ನು ಮಕ್ಕಳಿಲ್ಲದ ಕಾರಣ, ಕೆಲ ಗಣ್ಯ ವ್ಯಕ್ತಿಗಳು ಹಲವಾರು ಶಾಲಾ ಕಟ್ಟಡಗಳನ್ನ ತಮ್ಮ ಗೆಸ್ಟ್ ಹೌಸ್ ಆಗಿ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಈ ಪರಿಸ್ಥಿತಿ ಸೃಷ್ಟಿಯಾಗಿದೆ. ಈಗಲಾದರು ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ಶಾಲೆಗಳಿಗೆ ಮೂಲಭೂತ ಸೌಲಭ್ಯ ನೀಡಬೇಕು. ಹೆಚ್ಚು ಶಾಲೆಗಳನ್ನು ತೆರೆಯಬೇಕು ಎಂದು ಪಾಕಿಸ್ತಾನದ ಹಲವರು ಮನವಿ ಮಾಡಿದ್ದಾರೆ.