ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಕಳೆದ ಐದು ದಿನಗಳಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿತ್ಯ ವಿಚಾರಣೆ ನಡೆಸುತ್ತಿದ್ದಾರೆ. ಸರಾಸರಿ 8 ಗಂಟೆಗಳಿಗೂ ಅಧಿಕ ಕಾಲ ಈ ವಿಚಾರಣೆ ನಡೆದಿದ್ದು, ಒಟ್ಟು 50 ಗಂಟೆಗಳ ಕಾಲ ವಿಚಾರಣೆ ನಡೆದಿದೆ.
ತಮ್ಮ ವಿಚಾರಣೆ ಸಂದರ್ಭದಲ್ಲಿನ ಅನುಭವ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಅತಿ ಚಿಕ್ಕ ಕೊಠಡಿಯಲ್ಲಿ ನನಗೆ ಸತತ 11 ಗಂಟೆಗಳವರೆಗೆ ಕೂರಿಸಲಾಗುತ್ತಿತ್ತು. ಅವರ ಎಲ್ಲ ಪ್ರಶ್ನೆಗಳಿಗೂ ನಾನು ನಿಖರ ಉತ್ತರ ನೀಡಿದ್ದೇನೆ. ವಿಚಾರಣೆ ವೇಳೆ ನನಗೆ ಯಾವುದೇ ರೀತಿಯ ಸುಸ್ತು, ಬೇಸರ ಆಗುತ್ತಿಲ್ಲ ಎಂದಿದ್ದಾರೆ.
ಅಧಿಕಾರಿಗಳು ನನ್ನ ತಾಳ್ಮೆಯ ಗುಟ್ಟು ಕೇಳಿದ್ದು, ಈ ವೇಳೆ ಅವರಿಗೆ ವಿಪಶನ ಪದ್ಧತಿಯ ಧ್ಯಾನ ಪಾಲಿಸುವಂತೆ ಸಲಹೆ ನೀಡಿದ್ದೇನೆ. ನಾನೂ ಕೂಡ ಇದನ್ನು ನಿತ್ಯ ಮಾಡುವುದಾಗಿ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಅಗ್ನಿಪಥ ಯೋಜನೆ ಕುರಿತು ಮಾತನಾಡಿದ ಅವರು, ಕೃಷಿ ಕಾಯ್ದೆ ಹಿಂಪಡೆದಂತೆ ಇದನ್ನು ಕೂಡ ಕೇಂದ್ರ ಸರ್ಕಾರ ಹಿಂಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.