ಭೂ ಕುಸಿತದ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದ ಶಿರಾಡಿ ಘಾಟ್ ನಲ್ಲಿ ಈಗ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ. ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರೆದಿದ್ದು, ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ಭೂ ಕುಸಿತದ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ದಿಢೀರ್ ಬಂದ್ ಆದ ಕಾರಣ ವಾಹನ ಸವಾರರು ಪರದಾಡುವಂತಾಗಿತ್ತು. ಸಾವಿರಾರು ವಾಹನಗಳು ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತಿದ್ದು, ಸೂಕ್ತ ವ್ಯವಸ್ಥೆ ಇಲ್ಲದೆ ಚಾಲಕರು, ನಿರ್ವಾಹಕರು ಹಾಗೂ ಪ್ರಯಾಣಿಕರು ತೊಂದರೆ ಎದುರಿಸಿದ್ದರು.
ಮಳೆ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೀಗಾಗಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಲಘು ವಾಹನಗಳು ಏಕಮುಖವಾಗಿ ಸಕಲೇಶಪುರ, ಆನೆ ಮಹಲ್, ಕ್ಯಾನಳ್ಳಿ, ಚಿನ್ನಳ್ಳಿ, ಕಡಗರ ಹಳ್ಳಿ ಮಾರ್ಗದಲ್ಲಿ ಮಾರನಹಳ್ಳಿ ತಲುಪಿ ನಂತರ ಶಿರಾಡಿ ಘಾಟ್ ರಸ್ತೆ ಮೂಲಕ ಮಂಗಳೂರಿಗೆ ಹೋಗಬಹುದಾಗಿದೆ.
ಅದೇ ರೀತಿ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಲಘು ವಾಹನಗಳು ಮಾರನಹಳ್ಳಿಯಿಂದ ಕಾಡುಮನೆ, ಕಾರ್ಲೆ ಕೂಡಿಗೆ, ಆನೆ ಮಹಲ್, ಸಕಲೇಶಪುರ ಮಾರ್ಗದ ಮೂಲಕ ಸಂಚರಿಸಬಹುದಾಗಿದೆ. ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿಯಲಿದೆ.