ನಗರ ಪ್ರದೇಶಗಳಲ್ಲಿ ವಾಹನ ನಿಲ್ಲಿಸುವುದೇ ಬಹುದೊಡ್ಡ ಸಮಸ್ಯೆ. ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುವ ಕಾರಣ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ ಜನದಟ್ಟಣೆಗೂ ಕಾರಣವಾಗುತ್ತದೆ.
ಹೀಗಾಗಿ ಈ ರೀತಿ ಪಾರ್ಕಿಂಗ್ ಮಾಡುವವರಿಗೆ ಚುರುಕು ಮುಟ್ಟಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಒಂದು ಸಾವಿರ ರೂಪಾಯಿ ದಂಡ ವಿಧಿಸಲು ಮುಂದಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕುರಿತು ಮಾಹಿತಿ ನೀಡಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಈ ರೀತಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿರುವ ವಾಹನಗಳ ಫೋಟೋಗಳನ್ನು ಸಾರ್ವಜನಿಕರು ಕಳುಹಿಸಬಹುದಾಗಿದ್ದು, ಅವರುಗಳಿಗೆ 500 ರೂಪಾಯಿ ಬಹುಮಾನ ನೀಡಲಾಗುತ್ತದೆ. ಅಂದರೆ ಅಂತಹ ವಾಹನಗಳ ಮಾಲೀಕರಿಗೆ 1000 ರೂಪಾಯಿ ದಂಡ ವಿಧಿಸಿದರೆ ಅದರಲ್ಲಿ 500 ರೂಪಾಯಿಗಳನ್ನು ಫೋಟೋ ಕಳುಹಿಸಿದವರಿಗೆ ನೀಡಲಾಗುತ್ತದೆ. ಈ ಕುರಿತ ಆದೇಶ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.