ಪೆಟ್ರೋಲ್ – ಡೀಸೆಲ್ ದರ ಈಗಾಗಲೇ ಮುಗಿಲು ಮುಟ್ಟಿರುವ ಬೆನ್ನಲ್ಲೇ ವಾಹನ ಸವಾರರಿಗೆ ಶೀಘ್ರದಲ್ಲಿಯೇ ಮತ್ತೊಂದು ಶಾಕ್ ಎದುರಾಗಲಿದೆ. ಎಕ್ಸ್ ಪ್ರೆಸ್ ವೇ ಹಾಗೂ ಪಾವತಿ ಸೇವೆಗೆ ಒಳಪಡುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳಕ್ಕೆ ಸಿದ್ಧತೆ ನಡೆಸಲಾಗಿದೆ.
ಏಪ್ರಿಲ್ 1ರಿಂದಲೇ ನೂತನ ದರ ಜಾರಿಗೆ ಬರಲಿದೆ ಎನ್ನಲಾಗಿದ್ದು, ಕಾರು ಮತ್ತು ಇನ್ನಿತರ ಲಘು ವಾಹನಗಳಿಗೆ ಶೇಕಡ 5 ಹಾಗೂ ಭಾರಿ ವಾಹನಗಳಿಗೆ ಶೇಕಡ 10ರಷ್ಟು ಶುಲ್ಕ ಏರಿಕೆಯಾಗಬಹುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ಮಾಹಿತಿ ನೀಡಿವೆ.
ಟೋಲ್ ಪ್ಲಾಜಾದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಸ್ಥಳೀಯರಿಗೆ ನೀಡಲಾಗಿರುವ ರಿಯಾಯಿತಿ ದರದ ಮಾಸಿಕ ಪಾಸ್ ದರದಲ್ಲಿಯೂ ಕೂಡ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದ್ದು, ಪ್ರಸ್ತುತ ಇದಕ್ಕೆ 315 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ. ಈ ಪಾಸ್ ಹೊಂದಿರುವ ಸ್ಥಳೀಯರು ವಾಣಿಜ್ಯೇತರ ವಾಹನಗಳಲ್ಲಿ ಎಷ್ಟು ಬಾರಿಯಾದರೂ ಸಂಚರಿಸಬಹುದಾಗಿದ್ದು, ಈಗ ಈ ಶುಲ್ಕ ಕೂಡ ಹೆಚ್ಚಳವಾಗಲಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಮಧ್ಯೆ ಟೋಲ್ ಶುಲ್ಕ ಹೆಚ್ಚಳ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಇತ್ತೀಚಿಗಷ್ಟೇ ಗೃಹ ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್ ಗಳ ಬೆಲೆ ಕ್ರಮವಾಗಿ 50 ಮತ್ತು 350 ರೂಪಾಯಿ ಏರಿಕೆಯಾಗಿತ್ತು.