ವಾಹನ ಸವಾರರಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಭರ್ಜರಿ ಖುಷಿ ಸುದ್ದಿ ನೀಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಹೊರತುಪಡಿಸಿ ದಾಖಲೆ ಪತ್ರಗಳ ಪರಿಶೀಲನೆಗಾಗಿ ಅನಗತ್ಯವಾಗಿ ವಾಹನ ಸವಾರರನ್ನು ತಡೆಯದಂತೆ ಮೌಖಿಕವಾಗಿ ಸೂಚಿಸಿದ್ದ ಅವರು ಇದೀಗ ಇದರ ಪಾಲನೆಗಾಗಿ ಲಿಖಿತ ಆದೇಶ ಹೊರಡಿಸುವ ಮೂಲಕ ಕಟ್ಟಾಜ್ಞೆ ಮಾಡಿದ್ದಾರೆ.
ಜೂನ್ 27ರಂದು ಪ್ರವೀಣ್ ಸೂದ್ ಅವರು ಈ ಕುರಿತು ಮೌಖಿಕ ಸೂಚನೆ ನೀಡಿದ್ದರಾದರೂ ಬಹುತೇಕ ಪೊಲೀಸ್ ಸಿಬ್ಬಂದಿ ಇದಕ್ಕೆ ಮುನ್ನಡೆ ನೀಡದೆ ವಾಹನ ಸವಾರರನ್ನು ತಪಾಸಣೆಗಾಗಿ ತಡೆಯುತ್ತಿದ್ದರು. ಈ ಕುರಿತು ವಾಹನ ಸವಾರರಿಂದ ಸಾಕಷ್ಟು ದೂರುಗಳು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಈಗ ಲಿಖಿತ ಆದೇಶ ಹೊರಡಿಸಲಾಗಿದೆ.
ಬೆಂಗಳೂರಿನಂತಹ ಮಹಾನಗರಗಳಲ್ಲಿ ತಪಾಸಣೆ ಹೆಸರಿನಲ್ಲಿ ವಾಹನಗಳನ್ನು ತಡೆದಾಗ ಸಂಚಾರ ದಟ್ಟಣೆಯಾಗುತ್ತಿತ್ತು. ಅಲ್ಲದೆ ತಪಾಸಣೆ ಕಾರಣಕ್ಕಾಗಿ ವಾಹನ ಸವಾರರು ಗಂಟೆಗಟ್ಟಲೆ ಕಾಯುವಂತಾಗಿತ್ತು. ಈ ಹಿನ್ನೆಲೆಯಲ್ಲಿ ವಾಹನ ಸವಾರರ ಮನವಿಗೆ ಸ್ಪಂದಿಸಿ ಮೌಖಿಕ ಸೂಚನೆ ನೀಡಿದ್ದ ಪೊಲೀಸ್ ಮಹಾ ನಿರ್ದೇಶಕರು ಇದೀಗ ಲಿಖಿತ ಆದೇಶ ಹೊರಡಿಸಿದ್ದಾರೆ. ಇದು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನ್ವಯವಾಗಲಿದೆ.