ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದು ಟೋಲ್ ನಿಂದ ಮತ್ತೊಂದು ಟೋಲ್ ಗೆ 60 ಕಿಲೋಮೀಟರ್ ಅಂತರವಿರಬೇಕೆಂಬ ನಿಯಮವಿದೆ. ಆದರೆ ಇದನ್ನು ಉಲ್ಲಂಘಿಸಿ ಈ ಅಂತರದ ಮಧ್ಯೆಯೂ ಟೋಲ್ ಗೇಟ್ ಸ್ಥಾಪಿಸಿ ಶುಲ್ಕ ವಸೂಲಿ ಮಾಡಲಾಗುತ್ತಿತ್ತು.
ಇದು ವಾಹನ ಸವಾರರಿಗೆ ಹೊರೆಯಾಗಿ ಪರಿಣಮಿಸಿದ್ದು, ಇದೀಗ ರಾಜ್ಯ ಸರ್ಕಾರ ಇದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ವಿಧಾನ ಪರಿಷತ್ ನಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಸದಸ್ಯ ಹರೀಶ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಒಂದು ಟೋಲ್ ನಿಂದ ಇನ್ನೊಂದು ಟೋಲ್ ಗೆ ಕನಿಷ್ಠ 60 ಕಿಲೋಮೀಟರ್ ಅಂತರ ಇರಬೇಕು. ಆದರೆ ರಾಜ್ಯದಲ್ಲಿ ಕೆಲವೊಂದು ಟೋಲ್ ಗಳು 60 ಕಿಲೋಮೀಟರ್ ಒಳಗಡೆಯೇ ಇವೆ. ಇವುಗಳನ್ನು ತೆರವುಗೊಳಿಸುವ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಮಾತನಾಡಿದ್ದು, ಅವರು ಇದಕ್ಕೆ ಸಮ್ಮತಿಸಿದ್ದಾರೆ ಎಂದು ತಿಳಿಸಿದ್ದಾರೆ.