ಈ ವಾರಂತ್ಯದ ವೇಳೆಗೆ ಸತತ ರಜೆಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಹಲವರು ಪ್ರವಾಸದ ಪ್ಲಾನ್ ಮಾಡುತ್ತಿದ್ದಾರೆ. ಇದರ ಜೊತೆಗೆ ಬಹಳಷ್ಟು ಮಂದಿ ತಮ್ಮ ತಮ್ಮ ಊರುಗಳಿಗೆ ತೆರಳಲು ಚಿಂತನೆ ನಡೆಸಿದ್ದಾರೆ. ಇಂಥವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ.
ಏಪ್ರಿಲ್ 14ರ ಗುರುವಾರ ಅಂಬೇಡ್ಕರ್ ಜಯಂತಿ, ಏಪ್ರಿಲ್ 15 ರ ಶುಕ್ರವಾರ ಗುಡ್ ಫ್ರೈಡೆಗೆ ರಜೆ ಇದ್ದು ಏಪ್ರಿಲ್ 16 ಹೋಲಿ ಸಾಟರ್ಡೆ ಪ್ರಯುಕ್ತ ನಿರ್ಬಂಧಿತ ರಜೆ ಇದೆ. ಇನ್ನು ಏಪ್ರಿಲ್ 17 ಭಾನುವಾರವಾಗಿದ್ದು, ಹೀಗಾಗಿ ಏಪ್ರಿಲ್ 16 ರ ಶನಿವಾರ ಒಂದು ದಿನ ರಜೆ ಪಡೆದರೆ ಸತತ ನಾಲ್ಕು ದಿನಗಳ ಕಾಲ ರಜೆ ಸಿಕ್ಕಂತಾಗುತ್ತದೆ. ಹೀಗಾಗಿ ಬಹುತೇಕರು ಪ್ರವಾಸದ ಪ್ಲಾನ್ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಏಪ್ರಿಲ್ 13ರಂದು ರಾಜ್ಯ ಮತ್ತು ಹೊರರಾಜ್ಯದ ನಾನಾ ಭಾಗಗಳಿಗೆ ಹೆಚ್ಚುವರಿಯಾಗಿ 300 ಬಸ್ಸುಗಳನ್ನು ಬಿಡುತ್ತಿದೆ. ಬೆಂಗಳೂರಿಂದ ಬೆಳಗಾವಿ, ಕುಂದಾಪುರ, ಧರ್ಮಸ್ಥಳ, ಗೋಕರ್ಣ, ಹೊರನಾಡು, ಮಂಗಳೂರು, ಮಡಿಕೇರಿ, ಶೃಂಗೇರಿ, ಉಡುಪಿ, ಕುಕ್ಕೆ ಸುಬ್ರಹ್ಮಣ್ಯ, ಮಧುರೈ, ಕೊಡೈಕೆನಾಲ್, ಊಟಿ, ತಂಜಾವೂರು, ಕೊಯಮತ್ತೂರು, ವಿಜಯವಾಡ, ಹೈದರಾಬಾದ್, ನೆಲ್ಲೂರು, ಶಿರಡಿ, ಪಣಜಿ, ಪಾಂಡಿಚೇರಿಗೆ ಹೆಚ್ಚುವರಿಯಾಗಿ ಈ ವಿಶೇಷ ಬಸ್ಸುಗಳು ಸಂಚರಿಸಲಿವೆ.