ವಾರದಲ್ಲಿ 7 ದಿನಗಳು ಅನ್ನೋದು ನಮಗೆಲ್ಲರಿಗೂ ತಿಳಿದಿದೆ. ಮೊದಲ ದಿನ ಸೋಮವಾರದಿಂದ ಪ್ರಾರಂಭವಾಗಿ ಭಾನುವಾರದಂದು ಕೊನೆಗೊಳ್ಳುತ್ತದೆ. ಉದ್ಯೋಗಿಗಳು ಯಾವಾಗಲೂ ವಾರದ ಕೊನೆಯ ದಿನಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಯಾಕಂದ್ರೆ ಹೆಚ್ಚಿನ ಕಚೇರಿಗಳಿಗೆ ಶನಿವಾರ-ಭಾನುವಾರ ರಜೆ ಇರುತ್ತದೆ. ಆದರೆ ವಾರದಲ್ಲಿ ಕೇವಲ 7 ದಿನಗಳು ಏಕೆ ಎಂದು ಯೋಚಿಸಿದ್ದೀರಾ?
ಖಗೋಳ ವಸ್ತುಗಳನ್ನು ಆಧಾರವಾಗಿಟ್ಟುಕೊಂಡು ವಾರದಲ್ಲಿ 7 ದಿನಗಳಿರಬೇಕು ಎಂಬುದನ್ನು ನಿರ್ಧರಿಸಲಾಯಿತು. ಕೆಲವು ಆರಂಭಿಕ ಮಾನವ ನಾಗರಿಕತೆಗಳು ಗ್ರಹಗಳು, ಸೂರ್ಯ ಮತ್ತು ಚಂದ್ರನ ಚಲನೆಯನ್ನು ಆಧರಿಸಿ ವಿವಿಧ ಭವಿಷ್ಯವಾಣಿಗಳನ್ನು ಮಾಡಿದವು. ಇಂದಿನ ಇರಾಕ್ ಆಗಿರುವ ಬ್ಯಾಬಿಲೋನ್‌ನ ಜನರು ಪ್ರಾಚೀನ ಕಾಲದಲ್ಲಿ ಆಕಾಶದ ಲೆಕ್ಕಾಚಾರದಲ್ಲಿ ಬಹಳ ಪರಿಣಿತರಾಗಿದ್ದರು. ಇಲ್ಲಿ ವಾರದಲ್ಲಿ 7 ದಿನಗಳನ್ನು ಮೊದಲ ಬಾರಿಗೆ ಪ್ರತಿಪಾದಿಸಲಾಯಿತು.
ಸೂರ್ಯ, ಚಂದ್ರ, ಬುಧ, ಶುಕ್ರ, ಮಂಗಳ, ಗುರುಗಳ ಚಲನೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಇಲ್ಲಿಂದ ವಾರದಲ್ಲಿ ಏಳು ದಿನಗಳೆಂದು ನಿರ್ಧರಿಸಲಾಯ್ತು. ಅದೇ ರೀತಿ ತಿಂಗಳನ್ನು ಲೆಕ್ಕಾಚಾರ ಮಾಡಲು, ಚಂದ್ರನ ಚಲನೆಯನ್ನು ಲೆಕ್ಕಹಾಕಲಾಯಿತು. 28 ದಿನಗಳಲ್ಲಿ ಚಂದ್ರನು ತನ್ನ ಹಿಂದಿನ ಸ್ಥಾನವನ್ನು ಪುನರಾವರ್ತಿಸುತ್ತಾನೆ ಎಂಬುದು ಕಂಡು ಬಂದಿತು. ಹಾಗಾಗಿ ತಿಂಗಳಿಗೆ 4 ವಾರಗಳೆಂದು ನಿರ್ಧರಿಸಲಾಯಿತು.
ಈಜಿಪ್ಟ್ ಮತ್ತು ರೋಮ್‌ನಂತಹ ನಾಗರಿಕತೆಗಳಲ್ಲಿ ಮೊದಲ ವಾರವು 8-10 ದಿನಗಳಿರುತ್ತಿದ್ದವು. ಭಾರತದಲ್ಲಿ ವಾರದ 7 ದಿನಗಳ ಉಲ್ಲೇಖವು ಅಲೆಕ್ಸಾಂಡರ್ ನಂತರ ಶುರುವಾಗಿದೆ. ಅಲೆಕ್ಸಾಂಡರ್‌ನ ಆಕ್ರಮಣದ ನಂತರ ಗ್ರೀಕ್ ಸಂಸ್ಕೃತಿ ಬಹಳ ವೇಗವಾಗಿ ಹರಡಿತು. ಅಂತೆಯೇ, ಭಾರತದಲ್ಲಿ 7 ದಿನಗಳಿಗೆ ಒಂದು ವಾರ ಎಂಬುದು ಪ್ರಾರಂಭವಾಯಿತು. ರೋಮ್‌ನಲ್ಲಿ ವಾರವನ್ನು ಶನಿ, ಚಂದ್ರ, ಮಂಗಳ, ಬುಧ, ಗುರು ಮತ್ತು ಶುಕ್ರ ಎಂದು ಹೆಸರಿಸಲಾಯಿತು. ಇದು ನಂತರ ಇಂಗ್ಲಿಷ್‌ನಲ್ಲಿ ಮಂಡೇ, ಸಂಡೇ, ಫ್ರೈಡೇ ಮತ್ತು ಹಿಂದಿಯಲ್ಲಿ ಗುರುವಾರ, ಬುಧವಾರ, ಶುಕ್ರವಾರ ಆಯಿತು.