ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಬನಾರಸ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದು, ಈ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಜೊತೆಗಿದ್ದರು.
ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ವೇಳೆ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಜೊತೆಗಿದ್ದರು. ಇದಕ್ಕೂ ಮುನ್ನ ಕಾಶಿಯ ಗಂಗಾ ಆರತಿಯಲ್ಲಿ ಮೋದಿ ಪಾಲ್ಗೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ಚಿತ್ರಗಳನ್ನು ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಪವಿತ್ರ ನಗರಕ್ಕೆ ಸಾಧ್ಯವಾದಷ್ಟು ಉತ್ತಮ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಇದಾದ ಬಳಿಕ ಪ್ರಧಾನಿ ಮೋದಿ ಬನಾರಸ್ ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇಲ್ಲಿಯೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಗಿದ್ದರು. ಈ ವೇಳೆ ಅವರ ಭದ್ರತೆಯಲ್ಲಿ ನಿಯೋಜಿತರಾಗಿದ್ದ ಅಧಿಕಾರಿಗಳೂ ಇದ್ದರು. ಅಲ್ಲದೆ ನಿಲ್ದಾಣದಲ್ಲಿದ್ದ ಜನರು ದೂರದಿಂದಲೇ ಪ್ರಧಾನಿಯನ್ನು ವೀಕ್ಷಿಸಿದ್ದಾರೆ.
ಪ್ರಧಾನಮಂತ್ರಿ ಅವರು ಬನಾರಸ್ ರೈಲು ನಿಲ್ದಾಣದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಬನಾರಸ್ ನಿಲ್ದಾಣ. ರೈಲು ಸಂಪರ್ಕವನ್ನು ಹೆಚ್ಚಿಸುವುದರ ಜೊತೆಗೆ ಸ್ವಚ್ಛ, ಆಧುನಿಕ ಮತ್ತು ಪ್ರಯಾಣಿಕರ ಸ್ನೇಹಿ ರೈಲು ನಿಲ್ದಾಣಗಳ ನಿರ್ಮಾಣಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾತ್ರಿ 1 ಗಂಟೆಯ ನಂತರ ಪ್ರಧಾನಿ ಮೋದಿ ಬನಾರಸ್ ರೈಲು ನಿಲ್ದಾಣ ತಲುಪಿದರು. ಚಿತ್ರದಲ್ಲಿ ಅವರ ಹಿಂದೆ ಗಡಿಯಾರವೂ ಗೋಚರಿಸುತ್ತದೆ. ಅವರು ರೈಲು ನಿಲ್ದಾಣವನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ.
ರೈಲು ನಿಲ್ದಾಣದಿಂದ ನಿರ್ಗಮಿಸಿದ ಪ್ರಧಾನಿ ಅವರು ಸ್ಟಾಲ್‌ನಲ್ಲಿದ್ದ ವ್ಯಾಪಾರಿಗಳಿಗೆ ಹಸ್ತಲಾಘವ ಮಾಡಿ ಅಭಿನಂದಿಸಿದರು. ಸೋಮವಾರ ಬೆಳಗ್ಗೆಯೇ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಿಸಿದ್ದಾರೆ. ಎರಡು ದಿನಗಳ ಭೇಟಿಗಾಗಿ ಅವರು ವಾರಣಾಸಿಯಲ್ಲಿದ್ದಾರೆ. ಇಲ್ಲಿ ಅವರು ಕಾಲ ಭೈರವ ದೇವಾಲಯಕ್ಕೂ ಭೇಟಿ ನೀಡಿದ್ದರಲ್ಲದೇ, ಗಂಗಾ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದರು.