ಪಿಜ್ಜಾ ಬಹುತೇಕ ಎಲ್ಲರ ಫೇವರಿಟ್ ತಿನಿಸು. ಮಕ್ಕಳು, ಯುವಕರಿಂದ ಹಿಡಿದು ಎಲ್ಲರೂ ಪಿಜ್ಜಾ ಸೇವಿಸ್ತಾರೆ. ಚೀಸೀ ಪಿಜ್ಜಾ ರುಚಿಯಲ್ಲಿ ಅದ್ಭುತವಾಗಿದ್ದರೂ ಆರೋಗ್ಯಕ್ಕೆ ಹಾನಿಕರ. ಆದರೂ ಈ ಫಾಸ್ಟ್ ಫುಡ್‌ಗೆ ಬೇಡಿಕೆ ತುಂಬಾ ಹೆಚ್ಚಾಗಿದೆ. ಪಾರ್ಟಿ, ಫಂಕ್ಷನ್‌ಗಳಲ್ಲೆಲ್ಲ ಇದಕ್ಕೆ ಆದ್ಯತೆ ನೀಡಲಾಗುತ್ತದೆ. ಅತಿಯಾಗಿ ಪಿಜ್ಜಾ ತಿನ್ನುವುದರಿಂದ ನಮ್ಮ ದೇಹವು ಎಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ ಅನ್ನೋದು ತಿಳಿದ್ರೆ ನಿಜಕ್ಕೂ ಶಾಕ್ ಆಗಬಹುದು.
ಅತಿಯಾದ ಪಿಜ್ಜಾ ಸೇವನೆಯ ಅನಾನುಕೂಲಗಳು
ಹೃದ್ರೋಗಗಳ ಅಪಾಯ: ಚೀಸ್ ಮತ್ತು ಸಂಸ್ಕರಿಸಿದ ಮಾಂಸ ಬಳಸುವ ಕಾರಣ, ಪಿಜ್ಜಾದಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಾಗಿರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹಠಾತ್ತನೆ ಹೆಚ್ಚಿಸುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಉಂಟುಮಾಡುತ್ತದೆ. ನಿಯಮಿತವಾಗಿ ಮೂರರಿಂದ ನಾಲ್ಕು ಪೀಸ್‌ಗಳಷ್ಟು ಪಿಜ್ಜಾ ತಿನ್ನುವುದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಹಠಾತ್ ತೂಕ ಹೆಚ್ಚಳ: ಚೀಸ್ ಪಿಜ್ಜಾದ ಒಂದು ಸ್ಲೈಸ್ 400 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಎರಡು ಅಥವಾ ಮೂರು ಸ್ಲೈಸ್ ಪಿಜ್ಜಾ ತಿಂದರೆ 800 ರಿಂದ 1200 ಕ್ಯಾಲೊರಿ ನಮ್ಮ ದೇಹ ಸೇರುತ್ತದೆ. ಪೆಪ್ಪೆರೋನಿಯಂತಹ ಸಂಸ್ಕರಿಸಿದ ಮೇಲೋಗರಗಳನ್ನು ಹಾಕಿದಾಗ, ಕ್ಯಾಲೋರಿಗಳ ಪ್ರಮಾಣವು ಇನ್ನಷ್ಟು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ತೂಕ ವೇಗವಾಗಿ ಹೆಚ್ಚಾಗುತ್ತದೆ.
ಕ್ಯಾನ್ಸರ್ ಅಪಾಯ: ಪಿಜ್ಜಾಕ್ಕೆ ಬೇಕನ್, ಪೆಪ್ಪೆರೋನಿ ಮತ್ತು ಸಾಸೇಜ್‌ನಂತಹ ಅಧಿಕ ಕೊಬ್ಬಿನ ಸಂಸ್ಕರಿತ ಮಾಂಸವನ್ನು ಸೇರಿಸುವುದರಿಂದ ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್ ಸೇರಿದಂತೆ ಅನೇಕ ಮಹಾಮಾರಿಗಳಿಗೆ ನೀವು ತುತ್ತಾಗಬಹುದು.
ಪಿಜ್ಜಾ ತಿನ್ನಲು ಸುರಕ್ಷಿತ ಮಾರ್ಗ ಯಾವುದು?
ಕೆಲವರು ವಾರಕ್ಕೆ ಎರಡೂ ಮೂರು ಬಾರಿ ಪಿಜ್ಜಾ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಅಪಾಯಕಾರಿ. ಸೀಮಿತ ಪ್ರಮಾಣದಲ್ಲಿ ಪಿಜ್ಜಾವನ್ನು ಸೇವಿಸುವುದರಿಂದ ದೇಹಕ್ಕೆ ಹೆಚ್ಚು ಹಾನಿಯಾಗುವುದಿಲ್ಲ. ಪಿಜ್ಜಾವನ್ನು ಮೈದಾದಿಂದ ತಯಾರಿಸಲಾಗುತ್ತದೆ, ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಚಯಾಪಚಯಕ್ಕೂ ತೊಂದರೆ ಮಾಡುತ್ತದೆ.