ಚಳಿಗಾಲದಲ್ಲಿ ವಾಯುಮಾಲಿನ್ಯದ ಸಮಸ್ಯೆ ಹೆಚ್ಚಾಗಿರುತ್ತದೆ. ದೆಹಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಹೊಗೆಯಿಂದಾಗಿ ಗಾಳಿಯೇ ವಿಷಮಯವಾಗಿದೆ. ಜನರಿಗೆ ನೆಮ್ಮದಿಯಾಗಿ ಉಸಿರಾಡಲು ಕೂಡ ಸಾಧ್ಯವಾಗುತ್ತಿಲ್ಲ.
ಮಾಲಿನ್ಯದಿಂದ ಹೃದಯಾಘಾತ, ಅಸ್ತಮಾ, ಪಾರ್ಶ್ವವಾಯು, ಉಸಿರಾಟದ ಕಾಯಿಲೆಗಳೂ ಹೆಚ್ಚಾಗುತ್ತಿವೆ. ಈ ಸಮಸ್ಯೆಗಳಿಂದ ಪಾರಾಗಲು ಮನೆಯಲ್ಲಿ ಐದು ಬಗೆಯ ಗಿಡಗಳನ್ನು ನೆಟ್ಟುಬಿಡಿ. ಇವೆಲ್ಲವೂ ಇನ್‌ಡೋರ್ ಪ್ಲಾಂಟ್‌ಗಳು. ಮನೆಯ ಅಂದ ಹೆಚ್ಚಿಸುವುದರ ಜೊತೆಗೆ ಗಾಳಿಯನ್ನು ಸ್ವಚ್ಛಗೊಳಿಸುತ್ತವೆ.
ತುಳಸಿ: ತುಳಸಿ ವಾಯು ಮಾಲಿನ್ಯವನ್ನು ಹೋಗಲಾಡಿಸುತ್ತದೆ. ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ತುಳಸಿ ಗಿಡ ಇದ್ದೇ ಇರುತ್ತದೆ. ತುಳಸಿಯನ್ನು ಪೂಜಿಸುವ ಸಂಪ್ರದಾಯವಿದೆ. ತುಳಸಿ ಔಷಧೀಯ ಸಸ್ಯವೂ ಹೌದು.
ಇದು ಅನೇಕ ಅದ್ಭುತವಾದ ಆಯುರ್ವೇದ ಗುಣಗಳನ್ನು ಹೊಂದಿದೆ. ತುಳಸಿ ಎಲೆಗಳು ಗಾಳಿಯಲ್ಲಿರುವ ವಿಷಕಾರಿ ಅಂಶಗಳನ್ನು ಹೀರಿಕೊಳ್ಳುತ್ತವೆ ಮತ್ತು ಅದನ್ನು ಆಮ್ಲಜನಕವಾಗಿ ಪರಿವರ್ತಿಸುತ್ತವೆ. ಈ ಸಸ್ಯವನ್ನು ಕುಂಡದಲ್ಲಿ ಎಲ್ಲಿ ಬೇಕಾದರೂ ನೆಡಬಹುದು.
ಸ್ನೇಕ್ ಪ್ಲಾಂಟ್: ಸ್ನೇಕ್ ಪ್ಲಾಂಟ್ ಹಗಲು ರಾತ್ರಿ ಎರಡೂ ಹೊತ್ತಿನಲ್ಲೂ ಪರಿಣಾಮಕಾರಿ. ಚಳಿಗಾಲದಲ್ಲಿ ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯ ಸ್ನೇಕ್ ಪ್ಲಾಂಟ್‌ಗಿದೆ. ಈ ಸಸ್ಯದ ವಿಶೇಷತೆ ಏನೆಂದರೆ ಹಗಲು ಮತ್ತು ರಾತ್ರಿ ಇದು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಈ ಗಿಡವನ್ನು ನೆಟ್ಟರೆ 24 ಗಂಟೆಗಳ ಕಾಲ ಶುದ್ಧ ಗಾಳಿಯನ್ನು ಆನಂದಿಸಬಹುದು.
ಅಲೋವೆರಾ: ಅಲೋವೆರಾ ಗಿಡವು ಗಾಳಿಯಲ್ಲಿರುವ ಹಾನಿಕಾರಕ ಬೆಂಜೀನ್ ಮತ್ತು ಫಾರ್ಮಾಲ್ಡಿಹೈಡ್ ಅನ್ನು ಶೋಧಿಸುತ್ತದೆ ಮತ್ತು ಅದನ್ನು ಪ್ರತ್ಯೇಕಿಸುತ್ತದೆ ಈ ಸಸ್ಯದ 200 ಕ್ಕೂ ಹೆಚ್ಚು ಪ್ರಭೇದಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ನಿಮ್ಮ ಆಯ್ಕೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ನೀವು ಯಾವುದೇ ಸಸ್ಯವನ್ನು ತೆಗೆದುಕೊಳ್ಳಬಹುದು. ಮನೆಯಲ್ಲೇ ಆರಾಮಾಗಿ ಈ ಸಸ್ಯವನ್ನು ಬೆಳೆಸಬಹುದು.
ತಾಳೆ ಗಿಡ: ಅರೆಕಾ ಪಾಮ್ ಸಸ್ಯ ಕೂಡ ವಾಯು ಮಾಲಿನ್ಯದ ವಿರುದ್ಧ ಹೋರಾಡಬಲ್ಲದು. ಈ ಸಸ್ಯವು ಹೊಗೆಯಲ್ಲಿ ಕಂಡುಬರುವ ಟೊಲುಯೆನ್ ಎಂಬ ವಿಷಕಾರಿ ವಸ್ತುವಿನ ವಿರುದ್ಧ ಪರಿಣಾಮಕಾರಿಯಾಗಿ ರಕ್ಷಿಸುತ್ತದೆ. ಈ ಸಸ್ಯವನ್ನು ಬಿಸಿಲು ಕಡಿಮೆ ಇರುವ ಸ್ಥಳಗಳಲ್ಲಿ ಸುಲಭವಾಗಿ ನೆಡಬಹುದು ಮತ್ತು ಇದಕ್ಕೆ ಹೆಚ್ಚು ನೀರು ಬೇಕಾಗಿಲ್ಲ.
ಮನಿ ಪ್ಲಾಂಟ್: ಮನಿ ಪ್ಲಾಂಟ್ ಮನೆಯಲ್ಲಿದ್ದರೆ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕಾಗಿ ಮನಿ ಪ್ಲಾಂಟ್ ಅನ್ನು ಮನೆಯಲ್ಲಿ ನೆಡುತ್ತೇವೆ. ಗಾಳಿಯನ್ನು ಶುದ್ಧೀಕರಿಸುವಲ್ಲಿ ಇದು ಸಹಕಾರಿಯಾಗಿದೆ. ಸಂಜೆ ಈ ಸಸ್ಯವು ಆಮ್ಲಜನಕವನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಹಾಗಾಗಿ ಮಾಲಿನ್ಯದಿಂದ ಪಾರಾಗಿ ನೀವು ಶುದ್ಧ ಗಾಳಿಯನ್ನು ಪಡೆಯಬಹುದು.