ತಿರುವನಂತಪುರಂ: ವಾಟ್ಸಾಪ್ ಸಂಭಾಷಣೆಯಿಂದಾಗಿ ಶುರುವಾದ ಜಗಳ 42 ವರ್ಷದ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿರುವ ದುರ್ಘಟನೆ ಕೇರಳದ ಪತ್ತನಂತಿಟ್ಟಾ ಜಿಲ್ಲೆಯಲ್ಲಿ ನಡೆದಿದೆ.
ವಾಟ್ಸಾಪ್ ಸಂಭಾಷಣೆಯ ವಿಚಾರವಾಗಿ ನಡೆದ ಗಲಾಟೆಯಲ್ಲಿ ತಲೆಗೆ ಗಂಭೀರ ಗಾಯಗಳಾಗಿದ್ದ 42 ವರ್ಷದ ವ್ಯಕ್ತಿಯೊಬ್ಬರು, ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ರಂಜಿತ್ ಎಂದು ಗುರುತಿಸಲಾಗಿದೆ. ಅವರು ಜಿಲ್ಲೆಯ ಪುತುವಲ್‌ನಲ್ಲಿ ಪತ್ರಿಕೆ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ರಂಜಿತ್ ಅವರ ನೆರೆಹೊರೆಯವರಾದ ಅನಿಲ್ (43) ವಾಟ್ಸಾಪ್ ಗುಂಪಿನಲ್ಲಿ ಅವಮಾನಕರ ಕಾಮೆಂಟ್‌ನಿಂದ ಅಸಮಾಧಾನಗೊಂಡಿದ್ದರು. ಈ ಸಂಬಂಧ ಮಾರ್ಚ್ 27 ರಂದು ಇಬ್ಬರೂ ಜಗಳವಾಡಿದ್ದಾರೆ.
ಜಗಳ ತಾರಕಕ್ಕೇರಿ ಹೊಡಿಬಡಿ ನಡೆದಿದೆ. ಈ ವೇಳೆ ರಂಜಿತ್ ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ತಲೆಗೆ ಮಾರಣಾಂತಿಕ ಗಾಯವಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಅನಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.