ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಅಪ್ ಡೇಟ್ ಗಳನ್ನು ನೀಡುತ್ತಾ ಬಂದಿರುವ ಮೆಟಾ ಮಾಲೀಕತ್ವದ ಸಾಮಾಜಿಕ ಜಾಲತಾಣ ವಾಟ್ಸಾಪ್ ಈಗ ಮತ್ತೊಂದು ವೈಶಿಷ್ಟ್ಯವನ್ನು ಪರಿಚಯಿಸುವ ಮೂಲಕ ಮತ್ತಷ್ಟು ಗ್ರಾಹಕ ಸ್ನೇಹಿಯಾಗಿದೆ.
ಸೋಮವಾರದಂದು ತನ್ನ ಹೊಸ ವೈಶಿಷ್ಟ್ಯ ಕುರಿತು ವಾಟ್ಸಾಪ್ ಮಹತ್ವದ ಘೋಷಣೆ ಮಾಡಿದ್ದು, ಗ್ರಾಹಕರು ತಮ್ಮ ಸಂದೇಶ, ವಿಡಿಯೋ ಅಥವಾ ಫೋಟೋಗಳನ್ನು 24 ಗಂಟೆ ಅಥವಾ 90 ದಿನಗಳ ಕಾಲಾವಧಿಯೊಳಗೆ ಅಳಿಸಿಹೋಗಬಹುದಾದಂತೆ ಸೆಟ್ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ಕಾಲಮಿತಿ 7 ದಿನಗಳಾಗಿತ್ತು.
ಇದರಿಂದಾಗಿ ಸಂದೇಶ ಕಳಿಸುವ ಬಳಕೆದಾರ ಅಥವಾ ಸ್ವೀಕರಿಸಿದಾತ ಈ ಕಾಲಮಿತಿಯನ್ನು ನಿಗದಿಪಡಿಸಿಕೊಂಡರೆ ನಿಗದಿತ ಕಾಲಾವಧಿಯೊಳಗೆ ಆ ಸಂದೇಶಗಳು ತನ್ನಿಂತಾನೇ ಅಳಿಸಿಹೋಗಲಿವೆ. ಗ್ರೂಪ್ ಸಂದೇಶಕ್ಕೂ ಇದು ಅನ್ವಯಿಸುತ್ತದೆ ಎಂದು ಕಂಪನಿ ತಿಳಿಸಿದೆ.
ಈ ಹೊಸ ಆಯ್ಕೆ ಐಚ್ಚಿಕವಾಗಿದ್ದು, ಬಳಕೆದಾರರು ತಮಗೆ ಬೇಕೆಂದರೆ ಮಾತ್ರ ಬಳಸಿಕೊಳ್ಳಬಹುದಾಗಿದೆ. ಇದು ಹೊಸ ಚಾಟ್ ಗಳಿಗೆ ಮಾತ್ರ ಅನ್ವಯವಾಗಲಿದ್ದು, ಹಳೆ ಚಾಟ್ ಗಳು ಅಳಿಸಿಹೋಗುವುದಿಲ್ಲವೆಂದು ಕಂಪನಿ ಸ್ಪಷ್ಟಪಡಿಸಿದೆ. ಕಳೆದ ವರ್ಷ ವಾಟ್ಸಾಪ್ ಫೋಟೋ ಹಾಗೂ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿದರೆ ತನ್ನಿಂತಾನೇ ಅಳಿಸಿಹೋಗುವ ವೈಶಿಷ್ಟ್ಯವನ್ನು ಪರಿಚಯಿಸಿತ್ತು.
ಬಳಕೆದಾರರ ತಾನು ಕಳಿಸುವ ಸಂದೇಶಗಳಿಗೆ ಕಾಲಮಿತಿ ನಿಗದಿಪಡಿಸಿದರೆ ಅದು ಸ್ವೀಕರಿಸುವಾತನಿಗೂ ಕಾಲಮಿತಿ ಗೋಚರಿಸುತ್ತದೆ ಎನ್ನಲಾಗಿದ್ದು, ಒಂದು ವೇಳೆ ಬಳಕೆದಾರ ತನ್ನ ಸಂದೇಶ ಉಳಿಯಲು ಬಯಸಿದರೆ ಅದಕ್ಕೂ ಅವಕಾಶವಿದೆ. ಕೆಲವೊಂದು ಸಂದೇಶಗಳು ಹೆಚ್ಚುಕಾಲ ಇರಬಾರದೆಂದು ಬಯಸುವ ಬಳಕೆದಾರರಿಗೆ ಈ ವೈಶಿಷ್ಟ್ಯ ಅನುಕೂಲಕರವಾಗಲಿದೆ ಎನ್ನಲಾಗಿದೆ.