ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸಿ ತನ್ನ ಬಳಕೆದಾರರನ್ನು ಹಿಡಿದಿಡಲು ಪ್ರಯತ್ನಿಸುತ್ತಿರುವ ವಾಟ್ಸಾಪ್ ಶೀಘ್ರವೇ ಇನ್ನೊಂದಿಷ್ಟು ಹೊಸ ಅವತಾರಗಳನ್ನು ಪರಿಚಯಿಸುತ್ತಿದೆ.
ಮೆಸೇಜಿಂಗ್ ಫ್ಲಾಟ್‌ಫಾರ್ಮ್ ಆಗಿ ಜನರಿಗೆ ಅತೀ ಆಪ್ತವಾಗಿರುವ ವಾಟ್ಸಾಪ್, ವಿಡಿಯೋ ಕಾಲಿಂಗ್ ಫೀಚರ್ ಅನ್ನು ಪುನಶ್ಚೇತನಗೊಳಿಸುತ್ತಿದೆ. ಗೂಗಲ್ ಮೀಟ್ ಹಾಗೂ ಝೂಮ್ ವಿಡಿಯೋ ಕಾಲಿಂಗ್ ವಿಚಾರದಲ್ಲಿ ಸಾಕಷ್ಟು ಪೈಪೋಟಿ ನೀಡುತ್ತಿವೆ. ಹೀಗಾಗಿ ತನ್ನ ಬಳಕೆದಾರರು ವಿಡಿಯೋ ಕರೆ ಮಾಡಲು ಬೇರೆ ವೇದಿಕೆಗೆ ಶಿಫ್ಟ್ ಆಗಬಾರದೆಂಬುದು ವಾಟ್ಸಾಪ್ ಗುರಿಯಾಗಿದೆ.
ಈ ಕಾರಣಕ್ಕೆ ನಾವೀನ್ಯತೆ ತರಲು ಅವತಾರ್ ಫೀಚರನ್ನು ವಾಟ್ಸಾಪ್ ವಿಡಿಯೋ ಕರೆಯಲ್ಲಿ ಪರಿಚಯಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಕಸ್ಟಮೈಸ್ ಮಾಡಿಕೊಳ್ಳಲು ಬಳಕೆದಾರರಿಗೆ ಅವಕಾಶ ಕೊಡಲಾಗುತ್ತದೆ. ಮೆಸೆಂಜರ್ ಹಾಗೂ ಇನ್ ಸ್ಟಾಗ್ರಾಮ್‌ನಲ್ಲೂ ಅದೇ ಮಾದರಿ ಬಳಸಿಕೊಳ್ಳುವಂತೆ ಅವಕಾಶ ಇರಲಿದೆ.
ಬಹುಮುಖ್ಯವಾಗಿ ವಿಡಿಯೋ ಕರೆಯ ಸಂದರ್ಭದಲ್ಲಿ ಅವರ ನಿಜ ಮುಖದ ಬದಲಾಗಿ ಅವತಾರ್ ಮುಖ ತೋರುವಂತೆ ಆಪ್ಶನ್ ಕೊಡಲಾಗುತ್ತದೆ. ಇದು ಬಳಕೆದಾರರಿಗೆ ಬಹಳ ಸಂದರ್ಭದಲ್ಲಿ ಉಪಯೋಗಕ್ಕೆ ಬರುವ ನಿರೀಕ್ಷೆ ಇದೆ.
ಹಾಗೆಯೇ ಗ್ರೂಪ್‌ಗಳಿಂದ ಯಾರ ಅರಿವಿಗೂ ಬಾರದಂತೆ ಎಕ್ಸಿಟ್ ಆಗುವ ಮತ್ತೊಂದು ಫೀಚರ್ ಪರಿಚಯ ಆಗುವುದಿದೆ. ವಾಟ್ಸಾಪ್ ಡೆಸ್ಕ್ ಟಾಪ್ ಬಳಕೆದಾರರಿಗಾಗಿ ಬ್ಲರ್ ಟೂಲ್ ಕೂಡ ಪರಿಚಯಿಸಲಾಗುತ್ತಿದೆ.