
ದೀರ್ಘಕಾಲದವರೆಗೆ ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಲು ತಜ್ಞರು ಯಾವಾಗಲೂ ವಾಕಿಂಗ್ ಮತ್ತು ರನ್ನಿಂಗ್ ಅನ್ನು ಶಿಫಾರಸು ಮಾಡುತ್ತಾರೆ. ಕೆಲವರು ವಾಕಿಂಗ್‌ಗೆ ಆದ್ಯತೆ ನೀಡಿದ್ರೆ ಇನ್ನು ಕೆಲವರು ಜಾಗಿಂಗ್, ರನ್ನಿಂಗ್ ಅನ್ನು ಇಷ್ಟಪಡುತ್ತಾರೆ. ಆದರೆ ಮಾಹಿತಿಯ ಕೊರತೆಯಿಂದಾಗಿ ಆರೋಗ್ಯದ ಬಗ್ಗೆ ಸರಿಯಾದ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ.ಸಾಮಾನ್ಯವಾಗಿ ಜನರು ವಾಕಿಂಗ್ ಮತ್ತು ರನ್ನಿಂಗ್‌ನಲ್ಲಿ ತಮಗೆ ಯಾವುದು ಉತ್ತಮ ಎಂಬ ಗೊಂದಲಕ್ಕೊಳಗಾಗುತ್ತಾರೆ. ಇವೆರಡೂ ಕಾರ್ಡಿಯೋ ವ್ಯಾಯಾಮಗಳು. ಇವೆರಡರ ನಡುವಿನ ವ್ಯತ್ಯಾಸವೇನು? ಯಾವುದು ಉತ್ತಮ ಎಂಬುದನ್ನು ನೋಡೋಣ.
ವಾಕಿಂಗ್: ಪ್ರತಿಯೊಬ್ಬರೂ ನಿತ್ಯ ಅರ್ಧ ಗಂಟೆ ನಡೆಯಬೇಕು. ವಾಕಿಂಗ್ ದೇಹಕ್ಕೆ ಉತ್ತಮ ವ್ಯಾಯಾಮ. ಮನೆ ಮುಂದಿನ ಗಾರ್ಡನ್‌ನಲ್ಲಿ ಅಥವಾ ತಾರಸಿ ಮೇಲೆ ವಾಕಿಂಗ್ ಮಾಡಬಹುದು. ಆದರೆ ಸಾಮಾನ್ಯ ನಡಿಗೆಯನ್ನು ವಾಕಿಂಗ್ ಎಂದು ಪರಿಗಣಿಸುವ ತಪ್ಪನ್ನು ಎಂದಿಗೂ ಮಾಡಬೇಡಿ. ನಡೆಯುವಾಗ ಅರ್ಧ ಗಂಟೆಯಾದರೂ ಪೂರ್ಣ ಗಮನವಿಟ್ಟು ನಡೆಯಬೇಕು, ಆಗ ಮಾತ್ರ ನಡಿಗೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ.ಬೆಳಗ್ಗೆ ವಾಕಿಂಗ್ ಮಾಡಲು ಪ್ರಯತ್ನಿಸಿ, ಇದು ದೇಹಕ್ಕೆ ಶುದ್ಧ ಮತ್ತು ತಾಜಾ ಗಾಳಿಯನ್ನು ನೀಡುತ್ತದೆ.
ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ವಾಕಿಂಗ್ ಉತ್ತಮ ಆಯ್ಕೆಯಾಗಿದೆ. ವಾಕಿಂಗ್ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ವಾಕಿಂಗ್ ಸಹ ಕ್ಯಾಲೊರಿಗಳನ್ನು ಸುಡುತ್ತದೆ, ಇದರಿಂದ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಒತ್ತಡ, ಆತಂಕದಂತಹ ಸಮಸ್ಯೆಗಳು ದೂರವಾಗುತ್ತವೆ ಮತ್ತು ಮೂಡ್ ಕೂಡ ಸರಿಯಾಗಿರುತ್ತದೆ. ವಾಕಿಂಗ್ ಒಂದು ಕಾರ್ಡಿಯೋ ವ್ಯಾಯಾಮ.ವಾಕಿಂಗ್ ಹೃದ್ರೋಗದಿಂದ ಹೊರಬರಲು ಸಹಾಯ ಮಾಡುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ.
ವಾಕಿಂಗ್ ಪ್ರಯೋಜನಗಳು
1. ಚುರುಕಾದ ವೇಗದಲ್ಲಿ ನಡೆಯುವುದರಿಂದ ಹೃದ್ರೋಗದ ಅಪಾಯವನ್ನು ಶೇ. 9.3 ರಷ್ಟು ಕಡಿಮೆ ಮಾಡಬಹುದು.
2. ರಕ್ತದೊತ್ತಡದ ಅಪಾಯವು ಶೇ. 7.2 ರಷ್ಟು ಕಡಿಮೆಯಾಗುತ್ತದೆ.
3. ಮಧುಮೇಹದ ಅಪಾಯವನ್ನು ಶೇ. 12 ರಷ್ಟು ಕಡಿಮೆ ಮಾಡಬಹುದು.
4. ಕೊಲೆಸ್ಟ್ರಾಲ್ ಅಪಾಯವನ್ನು ಶೇ. 4.3 ರಷ್ಟು ಕಡಿಮೆ ಮಾಡಬಹುದು.
5. ಪ್ರತಿದಿನ 10 ಸಾವಿರ ಹೆಜ್ಜೆಗಳನ್ನು ನಡೆಯುವುದರಿಂದ ಅನೇಕ ಗಂಭೀರ ಕಾಯಿಲೆಗಳು ಮಾಯವಾಗುತ್ತವೆ.
ನಾವು ಯಾವುದೇ ವಯಸ್ಸಿನಲ್ಲಿ ನಡೆಯಬಹುದು. ಆದರೆ ಓಡುವುದು ಎಲ್ಲರಿಂದ ಅಸಾಧ್ಯ. ಓಡುವುದರಿಂದ ಕಾಲುಗಳಲ್ಲಿ ಉಳುಕು, ಸ್ನಾಯು ನೋವು, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಆದಾಗ್ಯೂ ಈ ಸಮಸ್ಯೆಗಳು ಆರಂಭಿಕ ಹಂತಗಳಲ್ಲಿ ಸಂಭವಿಸುತ್ತವೆ. ನೀವು ನಿಯಮಿತವಾಗಿ ಓಡುತ್ತಿದ್ದರೆ, ಅದು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡಬಲ್ಲದು.
ಓಡುವುದರಿಂದ ದೇಹದಲ್ಲಿ ರಕ್ತವು ವೇಗವಾಗಿ ಹರಿಯುತ್ತದೆ. ಓಟವು ಹೃದಯಕ್ಕೆ ಉತ್ತಮ ವ್ಯಾಯಾಮವಾಗಿದೆ. ತೂಕವನ್ನು ಕಳೆದುಕೊಳ್ಳಲು ರನ್ನಿಂಗ್ ಹೆಚ್ಚು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ದೇಹದ ಕೊಬ್ಬು ಮತ್ತು ಕ್ಯಾಲೊರಿಗಳನ್ನು ತ್ವರಿತವಾಗಿ ಸುಡುತ್ತದೆ. ದೇಹದ ಕೆಳಭಾಗದಲ್ಲಿ ನೋವು ಇರುವವರು ಓಡುವುದನ್ನು ತಪ್ಪಿಸಬೇಕು. ಇದು ಕೀಲುಗಳು ಮತ್ತು ಮೂಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ರನ್ನಿಂಗ್‌ನ ಪ್ರಯೋಜನಗಳು
1. ರಕ್ತ ಪರಿಚಲನೆ ಹೆಚ್ಚಾಗುತ್ತದೆ.
2. ಸ್ನಾಯುಗಳು ಬಲಗೊಳ್ಳುತ್ತವೆ.
3. ವೇಗವಾಗಿ ತೂಕವನ್ನು ಕಳೆದುಕೊಳ್ಳಲು ರನ್ನಿಂಗ್ ಉತ್ತಮ ಆಯ್ಕೆಯಾಗಿದೆ.
4. ಮಧುಮೇಹದ ಅಪಾಯ ಕಡಿಮೆಯಾಗುತ್ತದೆ. ಇನ್ಸುಲಿನ್ ತಯಾರಿಸುವ ಪ್ರಕ್ರಿಯೆಯು ಸುಧಾರಿಸುತ್ತದೆ.
5. ಓಡುವುದರಿಂದ ಆತ್ಮವಿಶ್ವಾಸವೂ ಹೆಚ್ಚುತ್ತದೆ.