ಸ್ವಂತ ಸೂರು ಹೊಂದುವ ಕನಸು ಕಂಡಿದ್ದ ರಾಜ್ಯದ ಬಡ ಜನತೆಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಪಿಎಂ ಆವಾಸ್ ಯೋಜನೆಯಡಿ ರಾಜ್ಯಕ್ಕೆ ನೀಡುವ ಅನುದಾನದಲ್ಲಿ ಗಣನೀಯವಾಗಿ ಕಡಿಮೆ ಮಾಡಲಾಗಿದ್ದು, ಆದರೆ ನೆರೆ ರಾಜ್ಯಗಳಿಗೆ ಮಾತ್ರ ಬಂಪರ್ ಕೊಡುಗೆ ಸಿಕ್ಕಿದೆ.
2017-18 ರಲ್ಲಿ ರಾಜ್ಯಕ್ಕೆ ಈ ಯೋಜನೆ ಅಡಿ 2.22 ಲಕ್ಷ ಮನೆಗಳು ಮಂಜೂರಾಗಿದ್ದು, ಇದಕ್ಕಾಗಿ 1,681 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಲಾಗಿತ್ತು. ಅಂದರೆ 2021-22 ರಲ್ಲಿ ಕೇವಲ 67,950 ಮನೆಗಳನ್ನು ಮಾತ್ರ ಮಂಜೂರು ಮಾಡಲಾಗಿದ್ದು, ಇದಕ್ಕಾಗಿ 529 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಲಾಗಿದೆ.
ಆದರೆ ನೆರೆಯ ಕೆಲವೊಂದು ರಾಜ್ಯಗಳಿಗೆ ಮನೆ ಸಂಖ್ಯೆಗಳನ್ನು ಹೆಚ್ಚಿಸುವುದರ ಜೊತೆಗೆ ಅನುದಾನದಲ್ಲೂ ಭಾರಿ ಏರಿಕೆಯಾಗಿದೆ. ಕೆಲವೊಂದು ರಾಜ್ಯಗಳಿಗೆ ಮನೆ ಸಂಖ್ಯೆಗಳು ಕಡಿಮೆ ಇದ್ದರೂ ಸಹ ಹೆಚ್ಚಿನ ಅನುದಾನ ಸಿಕ್ಕಿದೆ. ಕರ್ನಾಟಕಕ್ಕೆ ಅನುದಾನ ಹಾಗೂ ಮನೆಗಳ ಸಂಖ್ಯೆ ಕಡಿಮೆಯಾಗಲು ರಾಜ್ಯ ಸರ್ಕಾರದ ಪ್ರಮಾದವೇ ಕಾರಣವೆಂಬ ಮಾತುಗಳು ಕೇಳಿಬರುತ್ತಿವೆ.
ಫಲಾನುಭವಿಗಳ ಆಯ್ಕೆಗಾಗಿ ರಾಜ್ಯಗಳು ಬೇಡಿಕೆ ಸಮೀಕ್ಷೆ ನಡೆಸಿ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಅದರ ಆಧಾರದ ಮೇಲೆ ಮನೆ ಹಾಗೂ ಅನುದಾನ ಬಿಡುಗಡೆ ಮಾಡಲಾಗುತ್ತಿದ್ದು, ಆದರೆ ರಾಜ್ಯ ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ ತೋರಿದ್ದೇ ಮನೆಗಳ ಸಂಖ್ಯೆ ಹಾಗೂ ಅನುದಾನ ಕಡಿಮೆಯಾಗಲು ಕಾರಣವೆಂದು ಹೇಳಲಾಗಿದೆ.