ಗೂಗಲ್ ಸೇರಿದಂತೆ ಬಹುತೇಕ ಟೆಕ್ ಕಂಪನಿಗಳು ವರ್ಕ್ ಫ್ರಂ ಹೋಮ್ ನ್ನು ಕೊನೆಗೊಳಿಸುವ ಬಗ್ಗೆ ನಿರ್ಧರಿಸಿವೆ. ಅಮೆರಿಕದ ಮೂಲದ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಸಿಬ್ಬಂದಿಗೆ ಕಚೇರಿಗೆ ಮರಳುವಂತೆ ಬುಲಾವ್ ನೀಡಿದೆ. ಏಪ್ರಿಲ್ 4ರಿಂದ ಸಿಬ್ಬಂದಿಗೆ ಕಚೇರಿಗೆ ಹಾಜರಾಗುವಂತೆ ಬಹುತೇಕ ನಗರಗಳಲ್ಲಿ ಸೂಚನೆ ನೀಡಲಾಗಿದೆ.
ಗೂಗಲ್ ಗ್ಲೋಬಲ್ ಬೆನಿಫಿಟ್ಸ್ ಉಪಾಧ್ಯಕ್ಷ ಜಾನ್ ಕೇಸಿ, ಕೋವಿಡ್ 19 ಸೋಂಕು ಗಣನೀಯವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿನಿಂದ ಸಿಬ್ಬಂದಿಗೆ ಕಚೇರಿಗೆ ಮರಳುವಂತೆ ಇಮೇಲ್ ಕಳಿಸಿದ್ದಾರೆ. ಅಧಿಕೃತ ಇಮೇಲ್ನಲ್ಲಿ, ಕಡಿಮೆಯಾಗುತ್ತಿರುವ ಸೋಂಕಿನ ಪ್ರಮಾಣ ಹಾಗೂ ಹೆಚ್ಚಿದ ಸುರಕ್ಷತಾ ಮುಂಜಾಗ್ರತೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಕಚೇರಿ ಕೆಲಸವನ್ನು ಆರಂಭಿಸಲು ನಿರ್ಧರಿಸಿದ್ದೇವೆ ಎಂದು ಸೂಚಿಸಿದ್ದಾರೆ.
ಇನ್ನು ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಗೂಗಲ್ನ ಸಿಬ್ಬಂದಿ ವಾರದಲ್ಲಿ ಕನಿಷ್ಟ ಮೂರು ದಿನಗಳ ಕಚೇರಿಯಲ್ಲಿ ಹಾಗೂ ಇನ್ನೆರಡು ದಿನ ಮನೆಯಿಂದಲೇ ಕೆಲಸ ನಿರ್ವಹಿಸುತ್ತಾರೆ ಎನ್ನಲಾಗಿದೆ. ಇದು ಪ್ರಸ್ತುತ ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ಆದರೆ ಭಾರತದಲ್ಲೂ ಸಹ ಐಟಿ ಕಂಪನಿಗಳು ವರ್ಕ್ ಫ್ರಂ ಹೋಮ್ ಅಂತ್ಯಗೊಳಿಸಬಹುದೆಂದು ಹೇಳಲಾಗುತ್ತಿದೆ.