ಮೊಬೈಲ್ ಬಹಳ ಡೆಲಿಕೇಟ್. ಕೈಜಾರಿ ಜಖಂ ಮಾಡಿಕೊಳ್ಳುವುದು ಸಾಮಾನ್ಯ. ಈ ಮಧ್ಯೆ ಐಫೋನ್ ಇದ್ದಿದ್ದರಲ್ಲಿ ಗಟ್ಟಿಮುಟ್ಟು ಎಂಬ ಭಾವನೆ ಜನರಲ್ಲಿದೆ.
ಈ ಭಾವನೆಗೆ ತಕ್ಕಂತೆ ಘಟನೆಯೊಂದು ನಡೆದಿದೆ. 10 ತಿಂಗಳ ಹಿಂದೆ ನದಿಗೆ ಬೀಳಿಸಿದ ಐಫೋನ್ ಮತ್ತೆ ಸಿಕ್ಕಿದ್ದು, ಅದು ವರ್ಕಿಂಗ್ ಕಂಡೀಷನ್‌ನಲ್ಲಿದೆ ಎಂಬುದೇ ವಿಶೇಷ ಸಂಗತಿ.
ಯುಕೆ ಮೂಲದ ಓವೈನ್ ಡೇವಿಸ್ ತನ್ನ ಐಫೋನ್ ಅನ್ನು ಆಗಸ್ಟ್ 2021ರಲ್ಲಿ ಗ್ಲೌಸೆಸ್ಟರ್‌ಶೈರ್‌ನ ಸಿಂಡರ್‌ಫೋರ್ಡ್ ಬಳಿಯ ನದಿಯಲ್ಲಿ ಬೀಳಿಸಿಕೊಂಡಿದ್ದರು. ಬ್ಯಾಚುಲರ್ ಪಾರ್ಟಿಯ ಸಮಯದಲ್ಲಿ ಕೈಜಾರಿತ್ತು.
ಫೋನ್ ಮರಳಿ ಸಿಗುವುದಿಲ್ಲ ಎಂಬ ಆಲೋಚನೆಯೊಂದಿಗೆ ಅವರು ಮನೆಗೆ ಮರಳಿದ್ದರು. ಆದರೆ ಸುಮಾರು ಹತ್ತು ತಿಂಗಳ ನಂತರ ಮಿಗುಯೆಲ್ ಪಚೆಕೊ ಎಂಬುವರು ಸಂಪರ್ಕಿಸಿ ಮೊಬೈಲ್ ಹಿಂದಿರುಗಿಸಿದ್ದಾರೆ.
ಅವರು ಅದೇ ನದಿಯಲ್ಲಿ ತಮ್ಮ ಕುಟುಂಬದೊಂದಿಗೆ ದೋಣಿ ವಿಹಾರಕ್ಕೆ ಹೋದಾಗ ಡೇವಿಸ್ ಐಫೋನ್ ಸಿಕ್ಕಿತ್ತು. ಫೋನ್‌ನ ಮಾಲೀಕರನ್ನು ಹುಡುಕಲು ಅವರು ಮೊದಲು ಫೋನ್ ಅನ್ನು ಡ್ರೈ ಮಾಡಿದ್ದರು. ಮೊಬೈಲ್ ಸಿಕ್ಕಿದ್ದರ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನೀರಿನಲ್ಲಿ ಸಿಕ್ಕಿದ್ದರಿಂದ ಅದು ಕೆಲಸಕ್ಕೆ ಬಾರದು ಎಂದುಕೊಂಡರೂ ಅದರಲ್ಲಿ “ಭಾವನಾತ್ಮಕ” ವಿಷಯಗಳಿರಬಹುದು ಎಂದು ಅವರು ಭಾವಿಸಿ ಡ್ರೈ ಮಾಡಿ, ಚಾರ್ಜ್ ಮಾಡಲು ಇಟ್ಟಾಗ ಅಚ್ಚರಿಯಾಗುವಂತೆ ಫೋನ್ ಚಾರ್ಜರ್‌ನಿಂದ ಎನರ್ಜಿ ಸೆಳೆಯಲು ಪ್ರಾರಂಭಿಸಿತು. ಅದನ್ನು ಸ್ವಿಚ್ ಆನ್ ಮಾಡಿದಾಗ, ಪುರುಷ ಮತ್ತು ಮಹಿಳೆಯ ಸ್ಕ್ರೀನ್ ಸೇವರ್ ಅನ್ನು ನೋಡಿದ್ದಾರೆ.
ನದಿಗೆ ಬಿದ್ದ ಐಫೋನ್ ಕುರಿತು ಪ್ಯಾಚೆಕೊ ಎಫ್‌ಬಿ ಪೋಸ್ಟ್ ಅನ್ನು ಡೇವಿಸ್ ಸ್ನೇಹಿತರು ಗುರುತಿಸಿ ಡೇವಿಸ್, ಪಚೆಕೊ ಜೊತೆ ಸಂಪರ್ಕ ಸಾಧಿಸಲು ಸಹಾಯ ಮಾಡಿದರು.
ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಎಲ್ಲಾ ಐಫೋನ್‌ಗಳು IP68 ರೇಟ್ ಆಗಿವೆ. ಇದರರ್ಥ ಫೋನ್‌ಗಳು 1.5 ಮೀಟರ್ ಶುದ್ಧ ನೀರಿನಲ್ಲಿ 30 ನಿಮಿಷಗಳವರೆಗೆ ಜೀವಂತವಾಗಿರುತ್ತದೆ, ಆದರೆ ಇದು ಆಗಾಗ್ಗೆ ಸಂಭವಿಸುವ ಅದ್ಭುತವಾಗಿದೆ.