ವರುಣಾರ್ಭಟಕ್ಕೆ ಈ ಬಾರಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಮುಂಗಾರು ಆರಂಭದ ಸಂದರ್ಭದಲ್ಲಿ ಸಕಾಲಕ್ಕೆ ಮಳೆಯಾಗದಿದ್ದರೂ ಸಹ ಆ ಬಳಿಕ ಬಿಟ್ಟೂಬಿಡದಂತೆ ಮಳೆ ಸುರಿದಿದ್ದು, ಬೆಳೆ ನಷ್ಟದ ಜೊತೆಗೆ ಆಸ್ತಿ ಹಾನಿಯೂ ಸಂಭವಿಸಿದೆ.
ನಗರ ಪ್ರದೇಶದ ಜನತೆಯೂ ಸಹ ಮಳೆ ಅಬ್ಬರಕ್ಕೆ ಸಾಕಾಗಿ ಹೋಗಿದ್ದು, ಮಳೆ ಸುರಿದ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಜೊತೆಗೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಪರಿತಪಿಸಿದ್ದರು. ಇದೀಗ ಹಬ್ಬದ ಸಂದರ್ಭದಲ್ಲಿ ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತೆ ಮಳೆಯಾಗುತ್ತಿದೆ.
ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇದರ ಮಧ್ಯೆ ಇನ್ನೂ ಎರಡರಿಂದ ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿರುವ ಕಾರಣ ಹೊಲಗದ್ದೆಗಳಲ್ಲಿ ನೀರು ನಿಂತು ನಷ್ಟ ಸಂಭವಿಸಿದೆ.