ಅಸ್ಸಾಂನಲ್ಲಿ ಕಳೆದ ನಾಲ್ಕು ದಿನಗಳಿಂದ್ಲೂ ಭಾರೀ ಮಳೆಯಾಗ್ತಿದೆ. ಗುಡುಗು ಸಹಿತ ವರ್ಷಧಾರೆಯಿಂದಾಗಿ ಈವರೆಗೆ 11 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರೀ ಪ್ರಮಾಣದ ಗುಡುಗು, ಮಿಂಚು ಜನರಿಗೆ ಸಂಕಷ್ಟ ತಂದೊಡ್ಡಿದೆ.
ಚಂಡಮಾರುತಕ್ಕೆ ಸಿಕ್ಕು ದಿಬ್ರುಗಢದ ಖೇರ್ನಿ ಎಂಬಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಗುಡುಗು ಸಹಿತ ಚಂಡಮಾರುತ ಅಪ್ಪಳಿಸಿದ್ರಿಂದ ಈ ಗ್ರಾಮದಲ್ಲಿ ಮರಗಳು ನೆಲಕ್ಕುರುಳಿವೆ. ಈ ಘಟನೆಯಲ್ಲಿ ನಾಲ್ವರು ಬಲಿಯಾಗಿದ್ದಾರೆ. ಬರ್ಪೇಟಾ ಜಿಲ್ಲೆಯಲ್ಲಿ ಚಂಡಮಾರುತ ಮೂವರನ್ನು ಬಲಿ ಪಡೆದಿದೆ. ಗೋಲ್ಪಾರಾ ಜಿಲ್ಲೆಯಲ್ಲಿ ಸಿಡಿಲು ಬಡಿದು 15 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಭಾರೀ ಚಂಡಮಾರುತದಿಂದಾಗಿ ತಿನ್ಸುಕಿಯಾದಲ್ಲಿ ಮೂವರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಚಂಡಮಾರುತ, ಗುಡುಗು, ಸಿಡಿಲು ಮತ್ತು ಮಳೆಯ ಹೊಡೆತಕ್ಕೆ ಹಲವು ಮನೆಗಳು ನೆಲಕ್ಕುರುಳಿವೆ. ಅಪಾರ ಆಸ್ತಿ ಪಾಸ್ತಿ ಹಾನಿಯಾಗಿದೆ. ಮನೆ ಕಳೆದುಕೊಂಡಿರುವ ಸಾವಿರಾರು ಜನರು ಶಾಲೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಆಶ್ರಯ ಪಡೆದಿದ್ದಾರೆ. ನೂರಾರು ಮರಗಳು ಧರಾಶಾಯಿಯಾಗಿದ್ದು, ಎಲೆಕ್ಟ್ರಿಕ್ ಕಂಬಗಳು ಕೂಡ ಕೆಳಕ್ಕುರುಳಿವೆ.