ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಂತಹ ರೀತಿಯಲ್ಲಿ ಮಳೆ ಆಗುತ್ತಿದ್ದು, ಇದರಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಎಲ್ಲಿ ನೋಡಿದರೂ ನೀರು ತುಂಬಿಕೊಂಡಿದ್ದು, ದೈನಂದಿನ ಜೀವನ ನಡೆಸುವುದೇ ಕಷ್ಟಕರ ಎಂಬಂತಹ ಪರಿಸ್ಥಿತಿ ತಲೆದೋರಿದೆ.
ಇದರ ಮಧ್ಯೆ ಹವಾಮಾನ ಇಲಾಖೆ ಆಘಾತಕಾರಿ ಮಾಹಿತಿ ಒಂದನ್ನು ನೀಡಿದ್ದು, ಇನ್ನೂ ಎರಡರಿಂದ ಮೂರು ದಿನಗಳ ಕಾಲ ಭಾರಿ ಮಳೆ ಆಗಲಿದೆ ಎಂದು ಎಚ್ಚರಿಸಿದೆ. ಅದರಲ್ಲೂ ಬೆಂಗಳೂರು, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿರಲಿದೆ ಎನ್ನಲಾಗಿದೆ.
ಸೆಪ್ಟಂಬರ್ 9 ರವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎನ್ನಲಾಗಿದ್ದು, ರಾಜ್ಯ ರಾಜಧಾನಿಯಲ್ಲಿ ಈಗ ತುಂಬಿಕೊಂಡಿರುವ ನೀರನ್ನು ಹೊರ ಹಾಕುವುದೇ ಹರಸಾಹಸ ಎಂಬುದರ ಮಧ್ಯೆ ಮತ್ತೆ ಮಳೆ ಎಂಬ ಮುನ್ಸೂಚನೆ ಆತಂಕಕ್ಕೆ ಕಾರಣವಾಗಿದೆ.