ಆಗಸ್ಟ್ 5 ರ ಶುಕ್ರವಾರದಂದು ರಾಜ್ಯದಲ್ಲಿ ವರಮಹಾಲಕ್ಷ್ಮಿ ವ್ರತ ಆಚರಿಸಲಾಗುತ್ತಿದ್ದು, ಆ ದಿನ ಮುಜರಾಯಿ ದೇಗುಲಗಳಲ್ಲಿ ಇದನ್ನು ವಿಶೇಷ ರೀತಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಅಂದು ಮುಜರಾಯಿ ದೇಗುಲಗಳಿಗೆ ಆಗಮಿಸುವ ಮಹಿಳೆಯರಿಗೆ ಅರಿಶಿಣ – ಕುಂಕುಮ ಮತ್ತು ಹಸಿರು ಬಳೆ ನೀಡುವ ಮೂಲಕ ಗೌರವಿಸಲು ಸಿದ್ಧತೆ ನಡೆಸಲಾಗಿದೆ. ಈ ಕುರಿತಂತೆ ಈಗಾಗಲೇ ಮುಜರಾಯಿ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಈಗಾಗಲೇ ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ದೇವಾಲಯಗಳಲ್ಲಿ ಗೋ ಪೂಜೆ, ಯುಗಾದಿ ದಿನವನ್ನು ಧಾರ್ಮಿಕ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ಇದೀಗ ವರಮಹಾಲಕ್ಷ್ಮಿ ವ್ರತದ ದಿನ ಮಹಿಳೆಯರಿಗೆ ವಿಶೇಷ ಗೌರವ ನೀಡಲಾಗುತ್ತಿದೆ.
ಅಂದು ದೇವಾಲಯದಲ್ಲಿ ವಿಶೇಷ ರೀತಿಯಲ್ಲಿ ಪೂಜೆ ಮಾಡಲಾಗಿರುವ ಆರು ಹಸಿರು ಬಳೆ ಹಾಗೂ ಕಸ್ತೂರಿ ಅರಿಶಿಣ – ಕುಂಕುಮವನ್ನು ಲಕೋಟೆಯಲ್ಲಿ ವಿತರಿಸಲಾಗುತ್ತದೆ ಎಂದು ತಿಳಿದುಬಂದಿದೆ.