ಶುಕ್ರವಾರದಂದು ರಾಜ್ಯದಾದ್ಯಂತ ವರಮಹಾಲಕ್ಷ್ಮಿ ಪೂಜೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಸುರಿಯುವ ಮಳೆಯಲ್ಲೂ ಮಾರುಕಟ್ಟೆಗೆ ತೆರಳಿ ಹೂವು, ಹಣ್ಣು, ಬಾಳೆಕಂದು ಇತರ ಪದಾರ್ಥಗಳನ್ನು ಖರೀದಿಸಿ ದೇವರಿಗೆ ಹೂವು, ಒಡವೆಗಳಿಂದ ಅಲಂಕಾರ ಮಾಡುವ ಮೂಲಕ ಹೆಣ್ಣು ಮಕ್ಕಳು ಸಂಭ್ರಮಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಶ್ರೀ ಕ್ಷೇತ್ರ ಹೊಂಬುಜದಲ್ಲೂ ಶುಕ್ರವಾರದಂದು ವರಮಹಾಲಕ್ಷ್ಮಿ ಪೂಜೆ ನೆರವೇರಿದ್ದು, ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳಂತೆ ಅಭಿಷೇಕ, ಮಹಾಪೂಜೆ ನಡೆದಿದೆ.
ಅಲ್ಲದೆ ಈ ಸಂದರ್ಭದಲ್ಲಿ 108 ಬಗೆಯ ವಿವಿಧ ಸಿಹಿ ಪದಾರ್ಥ – ಫಲಗಳ ನೈವೇದ್ಯವನ್ನು ಶ್ರೀ ಪದ್ಮಾವತಿ ಅಮ್ಮನವರಿಗೆ ಅರ್ಪಿಸಲಾಗಿದ್ದು, ಈ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ನೆರೆಯ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ರಾಜಸ್ಥಾನಗಳಿಂದಲೂ ಸಹಸ್ರಾರು ಭಕ್ತರು ಆಗಮಿಸಿದ್ದರು.