ಸಾಧನೆ ಮಾಡಬೇಕೆಂಬ ಛಲವಿದ್ರೆ ಅದಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬ ಮಾತಿದೆ. ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಅಸಾಧ್ಯವಾದ ಕಾರ್ಯಗಳನ್ನು ಸಹ ಮಾಡಬಹುದು. ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಜಪಾನಿನ ಬಾಡಿ ಬಿಲ್ಡರ್ ಕನಾಜವಾ ಕೂಡ ಅವರಲ್ಲೊಬ್ಬರು. ವಯಸ್ಸು ಎಂಭತ್ತಾದ ಮೇಲೆ ಓಡಾಡುವುದೇ ಕಷ್ಟ. ಅಂಥದ್ರಲ್ಲಿ ಕನಾಜವಾ 86 ನೇ ವಯಸ್ಸಿನಲ್ಲಿ ಅದ್ಭುತವಾದ ಬಾಡಿ ಬಿಲ್ಡ್ ಮಾಡಿದ್ದಾರೆ.
ಜಿಮ್‌ನಲ್ಲಿ ಬೆವರು ಸುರಿಸಿ ದೇಹದಾರ್ಢ್ಯ ಪಟುವಾಗಿ ಬದಲಾಗಿದ್ದಾರೆ. ಯುವಕರನ್ನೂ ನಾಚಿಸುವಂತಿದೆ ಅವರ ಫಿಟ್ನೆಸ್. 86 ವರ್ಷದ ಕನಜವಾಗೆ ಸೊಂಟ ಅಥವಾ ಬೆನ್ನುನೋವಿನ ಸಮಸ್ಯೆಯಿಲ್ಲ. ಜಿಮ್‌ನಲ್ಲಿ ಕಸರತ್ತು ಮಾಡಲು ಯಾವುದೇ ಸಮಸ್ಯೆಗಳಿಲ್ಲ. ಗಂಟೆಗಟ್ಟಲೆ ಆತ ವರ್ಕೌಟ್ ಮಾಡ್ತಾರೆ. ಹಾಗಾಗಿ ಇಂಥಾ ಇಳಿವಯಸ್ಸಿನಲ್ಲಿಯೂ ದೇಹ ಉತ್ತಮ ಆಕಾರದಲ್ಲಿದೆ. ಯುವಕರಿದ್ದಾಗಿನಿಂದಲೂ ಕನಜಾವಾಗೆ ಬಾಡಿ ಬಿಲ್ಡರ್ ಆಗಬೇಕೆಂಬ ಕನಸು. ಬಹಳಷ್ಟು ಬಾರಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಾಂಪಿಯನ್ ಕೂಡ ಆಗಿದ್ದಾರೆ.
ಆದ್ರೆ 34ನೇ ವಯಸ್ಸಿಗೇ ಆತ ಕ್ರೀಡೆಯಿಂದ ನಿವೃತ್ತರಾದ್ರು. ಮದ್ಯಪಾನ, ಧೂಮಪಾನ, ಜಂಕ್‌ಫುಡ್‌ಗಳ ಸೇವನೆ ಶುರು ಮಾಡಿದ್ರು. 50 ವರ್ಷಗಳಾಗುವವರೆಗೂ ಇದೇ ರೀತಿ ಮುಂದುವರಿದಿತ್ತು. ಕನ್ನಡಿಯಲ್ಲಿ ತಮ್ಮನ್ನು ನೋಡಿಕೊಂಡ ಕನಜಾವಾಗೆ ಮತ್ತೆ ಜ್ಞಾನೋದಯವಾಗಿತ್ತು. ಕೆಟ್ಟ ಅಭ್ಯಾಸಗಳನ್ನೆಲ್ಲ ನಿಲ್ಲಿಸಿ ಮತ್ತೆ ಕನಜವಾ ಜಿಮ್‌ಗೆ ಹೋಗಲು ಆರಂಭಿಸಿದರು. ಈ ವರ್ಷದ ಜಪಾನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಅತ್ಯಂತ ಹಿರಿಯ ವ್ಯಕ್ತಿ ಈತ. ಒಸಾಕಾದಲ್ಲಿ ನಡೆದ ಪುರುಷರ ಬಾಡಿ ಬಿಲ್ಡಿಂಗ್ ಚಾಂಪಿಯನ್‌ಶಿಪ್‌ನ 68 ನೇ ಆವೃತ್ತಿಯಲ್ಲಿ ಸ್ಪರ್ಧಿಸಿದರು. ಆದರೆ ಅಂತಿಮ 12 ಸ್ಪರ್ಧಿಗಳಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಕನಜವಾ ಅವರು 20 ವರ್ಷದವರಾಗಿದ್ದಾಗ ಮೊದಲ ಬಾರಿಗೆ ಜಪಾನ್ ಚಾಂಪಿಯನ್‌ಶಿಪ್ ಗೆದ್ದರು. 24 ನೇ ವಯಸ್ಸಿನಲ್ಲಿ ಅವರ “ಮಿಸ್ಟರ್ ಜಪಾನ್” ಪ್ರಶಸ್ತಿಯನ್ನು ಗೆದ್ದಿದ್ದರು.