ಬಹ್ರೈಚ್: ಇತ್ತೀಚೆಗೆ ದೇಸಿ ವಿವಾಹ ಸಮಾರಂಭದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಮದುವೆಯ ದಿನ ವರ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಪ್ರವೇಶಿಸುವುದು ಸಂಪ್ರದಾಯವಾಗಿದೆ. ಉತ್ತರ ಭಾರತದಲ್ಲಿ ಕುದುರೆಯೇರಿ ಮೆರವಣಿಗೆ ಹೊರಡುವುದು ಸಂಪ್ರದಾಯವಾಗಿದೆ. ಆದರೆ, ಇಲ್ಲೊಬ್ಬ ವರ ತಾನು ಎಲ್ಲರಿಗಿಂತ ಡಿಫರೆಂಟು ಎಂಬಂತೆ ವಿಭಿನ್ನವಾಗಿ ಪ್ರವೇಶಿಸಿದ್ದಾನೆ.
ಉತ್ತರ ಪ್ರದೇಶದ ಲಕ್ಷ್ಮಣಪುರ- ಶಂಕರಪುರ ಗ್ರಾಮದಲ್ಲಿ ವರ ಬುಲ್ಡೋಜರ್ ಮೂಲಕ ಮದುವೆ ಮಂಟಪವನ್ನು ಪ್ರವೇಶಿಸಿದ್ದಾರೆ. ವರನ ಮೆರವಣಿಗೆ ಆಗಮಿಸಿದ ತಕ್ಷಣ ಇಡೀ ಗ್ರಾಮವು ಸೆಲ್ಫಿ ತೆಗೆದುಕೊಳ್ಳಲು ಸ್ಥಳಕ್ಕೆ ಜಮಾಯಿಸಿದೆ. ಹಾಗಂತ ವರನೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಬಂದಿಲ್ಲ. ಮೆರವಣಿಗೆ ಜೊತೆ ಬಂದ ಅಲಂಕೃತ ಬುಲ್ಡೋಜರ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಸ್ಥಳದಲ್ಲಿ ಜಮಾಯಿಸಿದ್ರು.
ವರ ಬುಲ್ಡೋಜರ್‌ನಲ್ಲಿ ಆಗಮಿಸಿದ ನಂತರ ಗ್ರಾಮಸ್ಥರು ʼಬುಲ್ಡೋಜರ್ ಬಾಬಾ ಕಿ ಜೈʼ ಎಂದು ಘೋಷಣೆ ಕೂಗಿದ್ದಾರೆ. ನಂತರ ಇಡೀ ಗ್ರಾಮವು ಹಬ್ಬದ ಸಂಭ್ರಮವನ್ನು ಹೊಂದಿತ್ತು.
ಪ್ರತಿಯೊಬ್ಬರು ತಮ್ಮ ಮದುವೆಯನ್ನು ಸ್ಮರಣೀಯವನ್ನಾಗಿಡಲು ಬಯಸುತ್ತಾರೆ. ಯಾಕೆಂದರೆ ಮದುವೆ ಆಗೋದು ಒಂದು ಬಾರಿ ಮಾತ್ರ. ಹೀಗಾಗಿ ತನ್ನ ಮದುವೆಯನ್ನು ಸ್ಮರಣೀಯವನ್ನಾಗಿಡಲು ತಾನು ಈ ರೀತಿ ವಿಶಿಷ್ಟವಾಗಿ ಎಂಟ್ರಿ ಕೊಟ್ಟಿದ್ದಾಗಿ ವರ ತಿಳಿಸಿದ್ದಾನೆ.