ಸೋಮವಾರದಂದು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕವು ಹಲವು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ, ನಗದು ಪತ್ತೆಯಾಗಿತ್ತು. ತನಿಖೆ ನಡೆದಂತೆಲ್ಲ ಅಚ್ಚರಿಯ ಮಾಹಿತಿಗಳು ಬಹಿರಂಗವಾಗುತ್ತಿದ್ದು, ಪೊಲೀಸರೇ ದಂಗಾಗಿದ್ದಾರೆ.
ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದವರ ಪೈಕಿ ಬಿಬಿಎಂಪಿ ಯಲಹಂಕ ವಲಯದ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ಕೆ.ಎಲ್. ಗಂಗಾಧರಯ್ಯ ಸಹ ಒಬ್ಬರಾಗಿದ್ದು, ಅವರ ಮನೆಯಲ್ಲಿ 73 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳು ಪತ್ತೆಯಾಗಿದ್ದು, ಇದರ ಜೊತೆಗೆ 400 ಬ್ಲೇಝರ್ ಗಳು ಸಿಕ್ಕಿವೆ.
ಗಂಗಾಧರಯ್ಯ ಮನೆಯ ಒಂದು ಕೋಣೆಯಲ್ಲಿ ಬಟ್ಟೆ ಮಾರಾಟ ಮಳಿಗೆಯಲ್ಲಿ ಇರಿಸುವಂತೆ ವ್ಯವಸ್ಥಿತವಾಗಿ ಈ ಬ್ಲೇಝರ್ ಗಳನ್ನು ಜೋಡಿಸಿಡಲಾಗಿದ್ದು, ಇವುಗಳ ಮೌಲ್ಯವೇ ಬರೋಬ್ಬರಿ 40 ಲಕ್ಷ ರೂಪಾಯಿಗಳಿಗೂ ಅಧಿಕ ಎಂದು ಹೇಳಲಾಗಿದೆ. ಅಲ್ಲದೆ ಗಂಗಾಧರಯ್ಯ, ಟೈಲರ್ ಒಬ್ಬರಿಗೆ ನಾಲ್ಕು ಲಕ್ಷ ರೂಪಾಯಿ ಬಿಲ್ ಪಾವತಿಸಿರುವುದು ದಾಳಿ ವೇಳೆ ಪತ್ತೆಯಾಗಿದೆ.