ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಸ್ಥಾಪನೆಯಾದ ಕಾರಣ ಬಲ ಕಳೆದುಕೊಂಡಿದ್ದ ಲೋಕಾಯುಕ್ತ, ಇದೀಗ ಹೈಕೋರ್ಟ್ ಆದೇಶದ ಬಳಿಕ ಮತ್ತೆ ತನ್ನ ಅಧಿಕಾರಗಳನ್ನು ಮರಳಿ ಪಡೆದಿದೆ. ಈಗಾಗಲೇ ಎಸಿಬಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 141 ಕಾನ್ಸ್ಟೇಬಲ್ ಹಾಗೂ ಹೆಡ್ ಕಾನ್ಸ್ಟೇಬಲ್ ಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದ್ದು, ಜೊತೆಗೆ ಕೇಸ್ ಗಳು ಕಡತಗಳನ್ನು ಸಹ ಸಲ್ಲಿಸಲಾಗಿದೆ.
ಕಾರ್ಯಾರಂಭದ ಮೊದಲ ದಿನದಿಂದಲೇ ಲೋಕಾಯುಕ್ತ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಭ್ರಷ್ಟ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ಸೋಮವಾರದಂದು ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದ ಬಿಬಿಎಂಪಿ ಜಂಟಿ ಆಯುಕ್ತ ಹಾಗೂ ಅವರ ಆಪ್ತ ಸಹಾಯಕನನ್ನು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳು ಹಿಡಿದಿದ್ದಾರೆ.
ಲೋಕಾಯುಕ್ತ ಈ ಮೊದಲಿನಂತೆ ಮತ್ತೆ ಬಲಯುತವಾಗಲಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಹೇಳಿದ್ದು, ಈ ಮೂಲಕ ಭ್ರಷ್ಟರಿಗೆ ಉಳಿಗಾಲವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಸಾರ್ವಜನಿಕರು ಪತ್ರ ಮುಖೇನ ಅಥವಾ ದೂರವಾಣಿ ಸಂಖ್ಯೆ 18004255320/080-22375014/080-22011298 ಅಥವಾ 9900644333 ಗೆ ಕರೆ ಮಾಡಬಹುದಾಗಿದೆ.