2019ರ ಲೋಕಸಭಾ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಾವು ಅಂದಿನ ಚುನಾವಣೆಯಲ್ಲಿ ಪರಾಭವಗೊಂಡಿದ್ದರ ಹಿಂದಿನ ಕಾರಣವನ್ನು ಈಗ ಬಹಿರಂಗಪಡಿಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ಪ್ರಾರಂಭವಾದ ಕಾಂಗ್ರೆಸ್ ನವ ಚಿಂತನಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಅಂದು ಎಚ್.ಡಿ. ಕುಮಾರಸ್ವಾಮಿ ಅವರ ಮನೆಗೆ ಹೋಗಿ ಬೆಂಬಲ ನೀಡುವಂತೆ ಕೋರಿದ್ದೇ ನನ್ನ ರಾಜಕೀಯ ಜೀವನದಲ್ಲಿ ಮಾಡಿದ ಬಹುದೊಡ್ಡ ತಪ್ಪು. ಇದರಿಂದಾಗಿ ನಾನು ಸೋಲುವುದರ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸಹ ಸೋಲುವಂತಾಯಿತು ಎಂದು ಹೇಳಿದರು.
ಆ ಪಕ್ಷದೊಂದಿಗಿನ ಹೊಂದಾಣಿಕೆ ಕಾರಣಕ್ಕಾಗಿಯೇ ನಾವು ಚುನಾವಣೆಯಲ್ಲಿ ಸೋತೆವು ಎಂದ ಅವರು, ದೇವೇಗೌಡರ ವಿರುದ್ಧವೂ ಟೀಕೆ ಮಾಡಿದ್ದಾರೆ. ದ್ವೇಷದ ರಾಜಕಾರಣ ಮಾಡುವುದರಲ್ಲಿ ದೇವೇಗೌಡರು ಸಿದ್ಧಹಸ್ತರು ಎಂದ ವೀರಪ್ಪ ಮೊಯ್ಲಿ, ತಮ್ಮನ್ನು ಪ್ರಧಾನಿ ಮಾಡಿದ ಪಕ್ಷದ ಮುಖಂಡರ ವಿರುದ್ಧವೇ ಅವರು ದೂರು ದಾಖಲಿಸಲು ಆರಂಭಿಸಿದರು. ಇದರಿಂದಾಗಿಯೇ ಪ್ರಧಾನಿ ಪಟ್ಟ ಕಳೆದುಕೊಂಡರು ಎಂದು ಹೇಳಿದರು.