ಪೋಸ್ಕೋ ಕಾಯ್ದೆಯಡಿಯಲ್ಲಿ ಲೈಂಗಿಕ ದೌರ್ಜನ್ಯ ಎಂದು ಸಾಬೀತಾಗಬೇಕಾದಲ್ಲಿ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಆಗಿರಬೇಕು ಎಂದು ಹೇಳಿದ್ದ ಮುಂಬೈ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ನ್ಯಾಯಮೂರ್ತಿಗಳಾದ ಯು.ಯು. ಲಲಿತ್, ಎಸ್. ರವೀಂದ್ರ ಭಟ್ ಹಾಗೂ ಬೇಲಾ ತ್ರಿವೇದಿ ನೇತೃತ್ವದ ಪೀಠವು ಸ್ಪರ್ಶ ಎಂಬ ಅರ್ಥವನ್ನು ಕೇವಲ ಚರ್ಮದ ಸಂಪರ್ಕ ಎಂದಷ್ಟೇ ಸೀಮಿತಗೊಳಿಸುವುದು ನಿಜಕ್ಕೂ ಅಸಂಬದ್ಧವಾಗಿದೆ ಎಂದು ಹೇಳಿದೆ. ಅಲ್ಲದೇ ಈ ರೀತಿಯ ವ್ಯಾಖ್ಯಾನವು ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಜಾರಿಗೆ ತರಲಾದ ಪೋಸ್ಕೋ ಕಾಯ್ದೆಯ ಉದ್ದೇಶವನ್ನೇ ಹರಣ ಮಾಡುವಂತಿದೆ ಎಂದು ಹೇಳಿದೆ.
ಲೈಂಗಿಕ ಉದ್ದೇಶವನ್ನೇ ಇಟ್ಟುಕೊಂಡು ಬಟ್ಟೆಯ ಮೂಲಕ ಅಪ್ರಾಪ್ತೆಯನ್ನು ಸ್ಪರ್ಶಿಸಿದರೂ ಸಹ ಅದು ಪೋಸ್ಕೋ ಕಾಯ್ದೆಯ ಅಡಿಯಲ್ಲಿಯೇ ಬರಲಿದೆ. ನ್ಯಾಯಾಲಯಗಳು ಸರಳ ಪದಗಳಲ್ಲಿ ದ್ವಂದ್ವ ಅರ್ಥವನ್ನು ಹುಡುಕುವ ಉತ್ಸಾಹವನ್ನು ತೋರಬಾರದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.
ಮುಂಬೈ ಹೈಕೋರ್ಟ್ನ ನಾಗ್ಪುರ ಪೀಠವು ಜನವರಿ 12ರಂದು ನೀಡಲಾದ ತೀರ್ಪಿನ ವಿರುದ್ಧ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಎನ್ಸಿಡಬ್ಲು ಹಾಗೂ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.