ಪುಣೆ ಮೂಲದ ಮಹಿಳೆ ಪ್ರೀತಿ ಮಾಸ್ಕೆ ಮಾಡಿರೋ ಈ ಸಾಹಸ ಕೇಳಿದ್ರೆ ಎಂಥವರು ಕೂಡ ನಿಬ್ಬೆರಗಾಗ್ತಾರೆ. ಈಕೆ 55 ಗಂಟೆ 13 ನಿಮಿಷಗಳಲ್ಲಿ ಲೇಹ್‌ನಿಂದ ಮನಾಲಿಗೆ ಏಕಾಂಗಿಯಾಗಿ ಸೈಕಲ್ ಸವಾರಿ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಟ್ರಾ ಸೈಕ್ಲಿಂಗ್‌ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
45 ವರ್ಷದ ಪ್ರೀತಿ ಒಂಟಿಯಾಗಿಯೇ 480 ಕಿಮೀ ದೂರವನ್ನು ಕ್ರಮಿಸಿರೋದು ವಿಶೇಷ. 6 ಸಾವಿರ ಕಿಲೋಮೀಟರ್ ಉದ್ದದ ಗೋಲ್ಡನ್ ಕ್ವಾಡ್ರಿಲ್ಯಾಟರಲ್‌ನಲ್ಲಿ ವೇಗವಾಗಿ ತೆರಳಿದ ಮಹಿಳಾ ಸೈಕ್ಲಿಸ್ಟ್ ಎಂಬ ದಾಖಲೆಯನ್ನೂ ಪ್ರೀತಿ ಹೊಂದಿದ್ದಾರೆ.
ಲೇಹ್‌ನಲ್ಲಿರುವ ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ನ ಮುಖ್ಯ ಇಂಜಿನಿಯರ್ ಬ್ರಿಗೇಡಿಯರ್ ಗೌರವ್ ಕರ್ಕಿ, ಜೂನ್ 22 ರಂದು ಬೆಳಿಗ್ಗೆ 6 ಗಂಟೆಗೆ ಪ್ರೀತಿ ಮಾಸ್ಕೆ ಅವರ ಸೈಕಲ್ ಸವಾರಿಗೆ ಚಾಲನೆ ನೀಡಿದ್ದರು. ಜೂನ್ 24 ರಂದು ಮಧ್ಯಾಹ್ನ 1:13 ಕ್ಕೆ ಕಮಾಂಡರ್ ಕರ್ನಲ್ ಶಬರೀಶ್ ವಚಾಲಿ ಅವರ ಸಮ್ಮುಖದಲ್ಲಿ ಪ್ರೀತಿ ಮಾಸ್ಕೆ, ಮನಾಲಿಯಲ್ಲಿ ತಮ್ಮ ಸವಾರಿಯನ್ನು ಮುಗಿಸಿದ್ದಾರೆ. 8,000ಮೀಟರ್ ಎತ್ತರದಲ್ಲಿ ಒಬ್ಬಂಟಿಯಾಗಿ ಸೈಕಲ್ ತುಳಿದುಕೊಂಡೇ ಬಂದ ಪ್ರೀತಿ ಅವರ ಸಾಹಸವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.
ಇದು ಅತ್ಯಂತ ಕಠಿಣ ಸವಾರಿ ಎಂದು ವಿಶ್ಲೇಷಕರು ಕೂಡ ಬಣ್ಣಿಸಿದ್ದಾರೆ. ಜೂನ್ 22 ರಂದು ಸವಾರಿ ಆರಂಭಿಸಿದ ಪ್ರೀತಿಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್, ಈ ಸಾಧನೆಯನ್ನು ಪೂರ್ಣಗೊಳಿಸಲು 60 ಗಂಟೆಗಳ ಕಾಲಾವಕಾಶವನ್ನು ನೀಡಿತ್ತು. ಸಾಕಷ್ಟು ಪ್ರಯಾಸದ ಮಾರ್ಗವಾಗಿದ್ದರಿಂದ ಪ್ರೀತಿಗೆ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿತ್ತು, ಎರಡು ಬಾರಿ ಆಕೆ ಆಮ್ಲಜನಕವನ್ನು ಬಳಸಬೇಕಾಯಿತು.
ಕೇವಲ ಲೇಹ್-ಮನಾಲಿ ಅಲ್ಟ್ರಾ ಸೈಕ್ಲಿಂಗ್ ಮಾತ್ರವಲ್ಲ, ಇನ್ನೂ ಹಲವಾರು ದಾಖಲೆಗಳನ್ನು ಪ್ರೀತಿ ಮಾಡಿದ್ದಾರೆ. ಪ್ರೀತಿ ಇಬ್ಬರು ಮಕ್ಕಳ ತಾಯಿ. ಅನಾರೋಗ್ಯದಿಂದ ಹೊರಬರಲು 40ನೇ ವಯಸ್ಸಿನಲ್ಲಿ ಸೈಕ್ಲಿಂಗ್ ಮಾಡಲು ಪ್ರಾರಂಭಿಸಿದ್ದರು. ನಮ್ಮಲ್ಲಿನ ಭಯವನ್ನು ಹೋಗಲಾಡಿಸಲು ಶಕ್ತರಾದ್ರೆ ಎಂಥಾ ಸಾಧನೆ ಬೇಕಾದರೂ ಮಾಡಬಹುದೆಂದು ತಮ್ಮ ಅನುಭವವನ್ನು ಪ್ರೀತಿ ಬಿಚ್ಚಿಟ್ಟಿದ್ದಾರೆ. ಎತ್ತರದ ಪ್ರಯಾಸಕರ ಮಾರ್ಗ, ವಿಭಿನ್ನ ಹವಾಮಾನ, ಅತಿಯಾದ ಶಾಖ, ಬಲವಾದ ಗಾಳಿ, ಹಿಮಪಾತ ಮತ್ತು ಘನೀಕರಿಸುವ ತಾಪಮಾನ ಹೀಗೆ ಕಠಿಣಾತಿ ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಪ್ರೀತಿ ಈ ದಾಖಲೆ ನಿರ್ಮಿಸಿದ್ದಾರೆ.